Sunday, April 13, 2025
Google search engine
Homeಮುಖಪುಟರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಶ್ರೀಗಳ ಹೆಸರಿಡಲು ಆಗ್ರಹ

ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಶ್ರೀಗಳ ಹೆಸರಿಡಲು ಆಗ್ರಹ

ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳ ಸೇವೆಯನ್ನು ಸಂಸ್ಮರಣೆಗೊಳಿಸಲು, ಮುಂದಿನ ತಲೆಮಾರಿಗೆ ಶ್ರೀಗಳ ಹಿರಿಮೆ, ಸಾಧನೆ ಪರಿಚರಿಸಲು ನವೀಕರಣಗೊಳ್ಳುತ್ತಿರುವ ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಶ್ರೀಗಳ ಹೆಸರು ಇಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.

ತುಮಕೂರಿನ ರೈಲ್ವೆ ನಿಲ್ದಾಣದ ಬಳಿ ಜಿಲ್ಲಾ ಕನ್ನಡ ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಶಿವಕುಮಾರ ಸ್ವಾಮಿಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಮುಖಂಡರು, ಮಂಗಳವಾರ ನಡೆಯುವ ಶ್ರೀಗಳ 118ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು ಇಡುವ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರ ಅಭಿಲಾಷೆಯೂ ಈ ನಿಲ್ದಾಣಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಬೇಕು ಎಂಬುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಪೂರಕ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮುಖಂಡ ಕೋರಿ ಮಂಜುನಾಥ್ ಮಾತನಾಡಿ, ನಾಡಿನ ಎಲ್ಲಾ ಮಠ, ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾಗಿ ಸೇವೆ ಸಲ್ಲಿಸಿದ ಡಾ.ಶಿವಕುಮಾರ ಸ್ವಾಮಿಗಳ ಸೇವೆ ಸದಾ ಸ್ಮರಣೀಯ. ಒಂದು ಸರ್ಕಾರ ಮಾಡಲಾಗದ ಕೆಲಸಗಳನ್ನು ಸ್ವಾಮೀಜಿ ಮಾಡಿದ್ದಾರೆ. ಇವರ ಹೆಸರನ್ನು ರೈಲು ನಿಲ್ದಾಣಕ್ಕೆ ಇಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ನಡೆದಾಡುವ ದೇವರಾಗಿ, ಸೇವಾಕಾರ್ಯ ಮಾಡಿ ಸಮಾಜ ಬೆಳಗಿದ ಸ್ವಾಮಿಗಳ ಹೆಸರು ಚಿರಸ್ಥಾಯಿ ಆಗಬೇಕು. ಮುಂದಿನ ಪೀಳಿಗೆಗೆ ಶ್ರೀಗಳ ಸೇವೆಯ ಪರಿಚಯ ಆಗಬೇಕು. ಅದಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮಿಗಳ ಹೆಸರು ಇಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಪಿ.ಎನ್.ರಾಮಯ್ಯ, ಆರ್.ಎನ್.ವೆಂಕಟಾಚಲ, ಕೊಪ್ಪಳ್ ನಾಗರಾಜ್, ಕನ್ನಡ ಪ್ರಕಾಶ್, ಹೊಸಕೋಟೆ ನಟರಾಜು ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular