ಇಂಗ್ಲೀಷ್ ಪಠ್ಯಪುಸ್ತಕದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿ ಅವರ ‘ದ್ರೌಪದಿ’ ಮತ್ತು ತಮಿಳುನಾಡಿನ ಇಬ್ಬರು ದಲಿತ ಲೇಖಕಿಯರ ಸ್ತ್ರೀವಾದಿ ಪಠ್ಯಗಳನ್ನು ತೆಗೆದುಹಾಕಲು ಆಗಸ್ಟ್ 25ರಂದು ಸಭೆ ಸೇರಿದ್ದ ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ತೀರ್ಮಾನಿಸಿದೆ.
ತಮಿಳುನಾಡಿನ ದಲಿತ ಸ್ತ್ರೀವಾದಿ ಲೇಖಕಿಯರಾದ ತೌಸ್ತಿನ ಸೂಸೈರಾಜ್ ಮತ್ತು ಸುಕೀರ್ತರಾಣಿ ಅವರ ಪಠ್ಯವನ್ನು ಇಂಗ್ಲೀಷ್ ಪಠ್ಯಪುಸ್ತಕದಿಂದ ಕೈಬಿಡಲು 15 ಮಂದಿ ಚುನಾಯಿತ ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.
ವಿಶ್ವವಿದ್ಯಾಲಯದ ಮೇಲುಸ್ತುವಾರಿ ಸಮಿತಿಯ ತೀರ್ಮಾನಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಇಂಗ್ಲಿಷ್ ವಿಭಾಗವನ್ನು ಪ್ರತಿನಿಧಿಸುವವರೇ ಇರಲಿಲ್ಲ. ಇಂಗ್ಲೀಷ್ ವಿಭಾಗದ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರನ್ನಾಗಿ ಮಾತ್ರ ಆಹ್ವಾನಿಸಲಾಗಿತ್ತು. ತಜ್ಞರ ಸಮಿತಿ ಪಠ್ಯ ಬದಲಾವಣೆ ನಿರ್ಧಾರ ಕೈಗೊಂಡಿರುವುದು ವಿವಾದಾತ್ಮಕವಾಗಿದೆ ಎಂದು ಆರೋಪಿಸಲಾಗಿದೆ.
ಅಕಾಡೆಮಿಕ್ ಕೌನ್ಸೆಲ್ ಸದಸ್ಯ ಮುತುರಾಜ್ ಧುಸಿಯಾ ‘ಪಠ್ಯಪುಸ್ತಕ ಪುನರ್ ರಚನೆ ಕೆಲಸ ಮುಂದುವರಿದಿದೆ. ಪ್ರಜಾಸತ್ತಾತ್ಮಕವಾಗಿಯೇ ವಿವಿಧ ಹಂತಗಳಲ್ಲಿ ನಡೆದಿದೆ. ವಿವಾದಾತ್ಮಕ ಪಠ್ಯ ಬದಲಾವಣೆ ಸಂಬಂಧ ಅಕಾಡೆಮಿಕ್ ಕೌನ್ಸಿಲ್ ಒಂದು ವರ್ಷದ ಹಿಂದೆ ಮೇಲುಸ್ತುವಾರಿ ಸಮಿತಿಯನ್ನು ರಚಿಸಿತ್ತು. ಆದರೆ ಸಮಿತಿ ಪರ್ಯಾಯದ ಕುರಿತು ಚರ್ಚಿಸಲಿಲ್ಲ. ಕೆಲ ಪಠ್ಯವನ್ನು ತೆಗೆದುಹಾಕಲು ರಾಜಕೀಯ ಕಾರಣಗಳಿವೆ. 15 ಮಂದಿ ಚುನಾಯಿತ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಇಂಗ್ಲೀಷ್ ಪಠ್ಯ ಬದಲಾವಣೆಗೆ ಅನುಮೋದನೆ ನೀಡಿದೆ’ ಎಂದು ಹೇಳಿದ್ದಾರೆ.
ದಲಿತ ಲೇಖಕಿಯರಾದ ಬಾಮ ಮತ್ತು ಸುಕೀರ್ತರಾಣಿ ಅವರ ಪಠ್ಯವನ್ನು ತೆಗೆದುಹಾಕುವ ಜೊತೆಗೆ ಮೇಲ್ಜಾತಿಯ ಬರಹಗಾರ್ತಿ ರಮಬಾಯಿ ಅವರ ಪಠ್ಯವನ್ನು ಸೇರ್ಪಡೆಗೆ ಅನುಮೋದನೆ ದೊರೆತಿದೆ. ಜೊತೆಗೆ ‘ವಸಾಹತುಶಾಹಿ ಪೂರ್ವ ಭಾರತೀಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತುಳಸಿದಾಸರ ‘ಚಂದ್ರಮತಿ ರಾಮಾಯಣ’ ಪಠ್ಯ ಸ್ತ್ರೀವಾದಿ ಹಿನ್ನೆಲೆಯ ರಾಮಾಯಣ ಎಂಬ ಕಾರಣಕ್ಕಾಗಿ ತೆಗೆದುಹಾಕಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.