ಸಾಂಸ್ಕೃತಿಕ ನಗರಿ ಮೈಸೂರಿನ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪೊಲೀಸರು ಮಾಹಿತಿ ಪಡೆಯುವ ಸಂದರ್ಭದಲ್ಲಿ ಈ ಕೃತ್ಯ ನಡೆದಿರುವುದು ಬಹಿರಂಗೊಂಡಿದೆ. ಇದು ಮೈಸೂರಿಗರನ್ನು ಬೆಚ್ಚಿ ಬೀಳಿಸಿದೆ.
ಆಗಸ್ಟ್ 24ರಂದು ಸಂಜೆ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಬೆಟ್ಟದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ಆರು ಮಂದಿ ಅಪರಿಚಿತರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಆನಂತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಪರಿಚಿತರು ಸಾಕಷ್ಟು ಮದ್ಯ ಸೇವನೆ ಮಾಡಿದ್ದರು. ಕುಡಿದ ಮತ್ತಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ತಿಳಿದುಬಂದಿದೆ.
ಯುವತಿಯ ಸ್ನೇಹಿತ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು “ನಾವು ವಿಹಾರಕ್ಕೆಂದು ಲಲಿತಾದ್ರಿಪುರಕ್ಕೆ ಹೋದಾಗ ಅಲ್ಲಿ ಮದ್ಯಪಾನ ಮಾಡುತ್ತಿದ್ದ ಗುಂಪು ನಮ್ಮನ್ನು ಸುತ್ತುವರಿಯಿತು. ಅಶ್ಲೀಲವಾಗಿ ಮಾತನಾಡಿದರು. ರೇಗಿಸಿದರು. ಇದನ್ನು ವಿರೋಧಿಸಿದ ನನಗೆ ಕಲ್ಲಿನಿಂದ ಹೊಡೆದರು. ನಾನು ಪ್ರಜ್ಞೆ ತಪ್ಪಿದೆ. ಆಗ ನನ್ನ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅವರಲ್ಲಿ ಒಬ್ಬನನ್ನು ಹೊರತುಪಡಿಸಿ ಉಳಿದವರೆಲ್ಲರೂ ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ.
ಈ ಸಂಬಂಧ ಆಲನಹಳ್ಳಿ ಪೊಲೀಸರು ಯುವತಿಯ ಸ್ನೇಹಿತ ನೀಡಿದ ದೂರಿನ ಅನ್ವಯ FIR ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಘಟನೆ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ” ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆದೇಶಿಸಿದ್ದಾರೆ.
ಗೃಹ ಸಚಿವ ಅರಗಜ್ಞಾನೇಂದ್ರ ಮಾತನಾಡಿ ‘ಸಂತ್ರಸ್ತ ಯುವತಿ ಭಯದಲ್ಲಿದ್ದಾರೆ. ಯಾವುದೇ ವಿಷಯವನ್ನೂ ಹೇಳುವ ಸ್ಥಿತಿಯಲ್ಲಿ ಆಕೆ ಇಲ್ಲ. ಇಂತಹ ಘಟನೆ ನಡೆದದ್ದು ನೋವಿನ ಸಂಗತಿ. ಘಟನೆ ಸಂಬಂಧ ಈವರೆಗೆ ಯಾವುದೇ ಸಾಕ್ಷ್ಯ ದೊರೆತಿಲ್ಲ. ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.