2013ರಲ್ಲಿ ನಡೆದ ಮುಝಾಫರ್ ಪುರ್ ಗಲಭೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧಗಳು ಸೇರಿದಂತೆ 77 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ಅಶ್ವಿನಿ ಉಪಾಧ್ಯಾಯ ಅವರು ಈ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಪೀಠಕ್ಕೆ ಮನವಿ ಮಾಡಿದರು.
ಈ ಅರ್ಜಿಯನ್ನು ವಿಲೇ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಹಿರಿಯ ವಕೀಲ ವಿಜಯ ಹಂಸಾರಿಯ ಅವರನ್ನು ಕೋರ್ಟ್ ಸಹಾಯಕರನ್ನಾಗಿ ನೇಮಕ ಮಾಡಿದ್ದು ವಕೀಲ ಸ್ನೇಹ ಕಾಲಿತ ಮೂಲಕ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯಲ್ಲಿ ಮುಝಫರ್ ಪುರ್ ಗಲಭೆ ಸಂಬಂಧ ಐದು ಜಿಲ್ಲೆಗಳ ಮೀರತ್ ವಲಯದಲ್ಲಿ 510 ಪ್ರಕರಣಗಳನ್ನು ದಾಖಲಿಸಿತ್ತು. ಇದರಲ್ಲಿ 6,869 ಆರೋಪಿಗಳಿದ್ದಾರೆ ಎಂದು ಸರ್ಕಾರ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಟ್ಟು 510 ಪ್ರಕರಣಗಳ ಪೈಕಿ 175 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 165 ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಿದೆ. 170 ಪ್ರಕರಣಗಳನ್ನು ಹೊಡೆದುಹಾಕಲಾಗಿದೆ. ಉತ್ತರ ಪ್ರದೇಶ ಸರ್ಕಾರ ಸಿಆರ್.ಪಿಸಿ ಸೆಕ್ಷನ್ 321ರ ಪ್ರಕಾರ 77 ಕೇಸ್ ಗಳನ್ನು ಹಿಂಪಡೆದಿರುವುದಾಗಿ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಪ್ರಕರಣ ಹಿಂಪಡೆದಿರುವ ಬಗ್ಗೆ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ದಿ ವೈರ್ ವರದಿ ತಿಳಿಸಿದೆ.
ಐಪಿಸಿ ಸೆಕ್ಷನ್ 397ರಡಿ ಜೀವಾವಧಿ ಶಿಕ್ಷೆ ನೀಡಬಹುದಾದ ಪ್ರಕರಣಗಳನ್ನು ಉತ್ತರ ಪ್ರದೇಶ ಸರ್ಕಾರ ಹಿಂಪಡೆದಿದೆ. ಅಷ್ಟೇ ಅಲ್ಲ ಕರ್ನಾಟಕ 62 ಪ್ರಕರಣಗಳನ್ನು, ತಮಿಳುನಾಡು 4, ತೆಲಂಗಾಣ 14, ಕೇರಳ 36 ಪ್ರಕರಣಗಳನ್ನು ಹಿಂಪಡೆದಿದೆ ಎಂದು ಅಮಿಕಸ್ ಕ್ಯೂರಿ ಸುಪ್ರೀಂಕೋರ್ಟ್ ಗೆ ತಿಳಿಸಿದರು.