Sunday, March 16, 2025
Google search engine
Homeಮುಖಪುಟ'ಆರಂಭದಲ್ಲಿ ದಲಿತ ಸಾಹಿತಿಗಳಲ್ಲಿದ್ದ ಆಕ್ರೋಶ ತಗ್ಗಿದೆ'-ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

‘ಆರಂಭದಲ್ಲಿ ದಲಿತ ಸಾಹಿತಿಗಳಲ್ಲಿದ್ದ ಆಕ್ರೋಶ ತಗ್ಗಿದೆ’-ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ದಲಿತ ಸಾಹಿತಿಗಳಲ್ಲಿ ಆರಂಭದಲ್ಲಿದ್ದ ಆಕ್ರೋಶ, ನೋವು, ಅಸಹನೆ, ಸಮಾಜದ ಬಗೆಗೆ ಇದ್ದ ಭಿನ್ನ ನಿಲುವುಗಳೆಲ್ಲ ಈಗ ಸ್ವಲ್ಪ ತಗ್ಗಿ ಅದು ನಿಜವಾದ ಕಾವ್ಯ ಸತ್ವವನ್ನು ಪಡೆದುಕೊಳ್ಳುತ್ತಿರುವ ನೆಲೆಗಳಲ್ಲಿ ಹಲವು ಮಜಲುಗಳಿವೆ ಮತ್ತು ಹಲವು ಕವಿಗಳು ಅದರಲ್ಲಿ ಕೆಲಸವನ್ನು ಮಾಡಿದ್ದಾರೆ ಎಂದು ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹಾಗೂ ಸಮತಾ ಪ್ರಕಾಶನದ ವತಿಯಿಂದ ತುಮಕೂರು ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ಬರೆದಿರುವ ‘ತೊಗಲ ಯೋಗಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಹಳ ಮುಖ್ಯವಾಗಿ ದೇವನೂರು ಮಹಾದೇವ, ಸಿದ್ದಲಿಂಗಯ್ಯ ಕವಿ ಮತ್ತು ಲೇಖಕರು ಹಾಕಿಕೊಟ್ಟಂತಹ ಮಾರ್ಗದೊಳಗೆ ದಲಿತ ಸಾಹಿತ್ಯ ಅನೇಕ ರೀತಿಯ ವಿವಿಧ ಸ್ವರಗಳನ್ನು ಜೋಡಿಸಿಕೊಟ್ಟಿತು. ಬೇಂದ್ರೆಯವರ ಒಂದು ಮಾತಿದೆ. ನೂರು ಮರ ನೂರು ಸ್ವರ. ನೂರು ಮರಗಳು ನೂರು ಸ್ವರಗಳನ್ನಾಗಿ ನೀಡುವಂತಹ ಸಾಹಿತ್ಯದ ಚಟುವಟಿಕೆ ದಲಿತ ಸಾಹಿತ್ಯದೊಳಗೆ ನಡೆದು ಬಂದಿರುವುದನ್ನು ನಾವು ಗಮನಿಸಬಹುದು ಎಂದರು.

ಕಾವ್ಯವನ್ನು ಮರೆಯುವ ದಿನಗಳಲ್ಲಿ ಕಾವ್ಯದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವ ಹಾಗೆ ತೊಗಲ ಯೋಗಿ ಕೃತಿ ಇದೆ. ಕಾವ್ಯ ಗೆಲುವಿನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಕವನ ಸಂಕಲನದ ಮೊದಲ ಪದ್ಯದಲ್ಲಿ ಧಾರುಣ ಚಿತ್ರವನ್ನು ಕೊಡುವ ಶಿವಣ್ಣ ಕೊನೆಯಲ್ಲಿ ಮಾತನಾಡುವಾಗ ಹಳಸಿದ ಅನ್ನ ನೀಡುವ ಮಕ್ಕಳಿಗೆ ಪ್ರತಿಯಾಗಿ ನೀಡುತ್ತಿದ್ದೇವೆ ಇಂದು ಅನ್ನ, ಹರಿವೆ, ಶಿಕ್ಷಣ ಎಂದು ವಿಭಿನ್ನವಾಗಿ ಕಾವ್ಯವನ್ನು ಕಟ್ಟಿಕೊಡುತ್ತಾರೆ ಎಂದು ಹೇಳಿದರು.

ಪಾರಂಪರಗತವಾಗಿ ನಮ್ಮ ದಲಿತ ಸಮುದಾಯವನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿತ್ತು ಎಂಬ ಚಿತ್ರಣವನ್ನು ಕೊಡುತ್ತಾರೆ ಕವಿ ಶಿವಣ್ಣ, ಹಳಸಿದ ಅನ್ನ ಕೊಡುವ ಅಮಾನವೀಯವಾದ ಸಾಮಾಜಿಕ ಚಿತ್ರಣವನ್ನು ಕೊಡುತ್ತಾ ಗೆಲುವಿನ ಅಂಶವನ್ನು ತೋರಿಸಿ ಬಿಡುವುದು ಬಹಳ ದೊಡ್ಡ ವಿಚಾರ. ಪರಿಸ್ಥಿತಿ ಅದಲುಬದಲಾಗಿರುವುದನ್ನು ಈ ಕಾವ್ಯದ ಮೂಲಕ ತೋರಿಸಿಕೊಡುತ್ತಾರೆ.

ಡಾ.ಶಿವಣ್ಣ ತಿಮ್ಲಾಪುರ ಅವರ ಕಾವ್ಯದ ಮೇಲೆ ಕುವೆಂಪು ಅವರ ಪ್ರಭಾವ ಆಗಿರುವುದನ್ನು ಕಾಣಬಹುದು.

ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಸಂಸ್ಕೃತಿ ಚಿಂತಕ ಡಾ.ನಟರಾಜ ಬೂದಾಳ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು. ಸಾಹಿತಿ ತುಂಬಾಡಿ ರಾಮಯ್ಯ, ಕುಲಸಚಿವೆ ನಾಹಿದಾ ಜಮ್ ಜಮ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಮಾಜಿಕ ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್.ರೇಣುಕಪ್ರಸಾದ್ ಭಾಗವಹಿಸಿದ್ದರು. ನವೀನ್ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular