ಮತ ಎಂಬುದು ಮನೆ ಮಗಳಿದ್ದಂತೆ. ಚುನಾವಣೆಯಲ್ಲಿ ಹಣಕ್ಕಾಗಿ ತಮ್ಮ ಮತ ಮಾರಿಕೊಂಡರೆ ಅದು ತಮ್ಮ ಮಗಳನ್ನು ಮಾರಿಕೊಂಡಂತೇ ಆಗುತ್ತದೆ. ಮತಕ್ಕೆಅದರದ್ದೇ ಆದ ಶ್ರೇಷ್ಠತೆ ಇದೆ. ಅದರ ಮೌಲ್ಯ ಕಾಪಾಡಿಕೊಳ್ಳಿ. ಹಿಂದಿನ ಚುನಾವಣೆಗಳಲ್ಲಿ ನಾವೆಷ್ಟು ಪ್ರಮಾಣಿಕವಾಗಿ ಮತ ಚಲಾಯಿಸದ್ದೇವೆ ಎಂಬುದರ ಆತ್ಮವಿಮರ್ಶೇ ಮಾಡಿಕೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕು ವನಕಲ್ಲು ಮಲ್ಲೇಶ್ವರ ಸಂಸ್ಥಾನದ ಡಾ.ಬಸವರಮಾನಂದ ಸ್ವಾಮೀಜಿ ಹೇಳಿದರು.
ಭಾನುವಾರ ತುಮಕೂರಿನ ಕನ್ನಡ ಭವನದಲ್ಲಿ ನಡೆದ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟ ಏರ್ಪಡಿಸಿದ್ದ ಜಿಲ್ಲಾ ಅಲೆಮಾರಿ ಮತ್ತು ಅರೆಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಇಂದು ರಾಜಕೀಯ ಸಿದ್ಧಾಂತ ಗಾಳಿಗೆ ತೂರಿಹೋಗುತ್ತಿದೆ. ಚುನಾವಣೆಯಲ್ಲಿ ಚಲಾವಣೆಯಾಗುವ ಮತಗಳು ಅಪಮೌಲ್ಯವಾಗುತ್ತಿವೆ. ರಾಜಕಾರಣ ಹಣದ ಹೊಳೆಯಲ್ಲಿ ತೇಲಿ ಹೋಗುತ್ತಿರುವುದು ವಿಷಾದಕರ ಎಂದು ಹೇಳಿದರು.
ಧರ್ಮ ಮತ್ತು ದೇವರು ನಮ್ಮ ತಲೆಯಲ್ಲಿ ತುಂಬಿರುವಾಗ ಸಂವಿಧಾನ ದೇಶದಲ್ಲಿ ಫಲ ನೀಡುವುದೇ ಎಂಬ ಮಾತಿಗೆ ಡಾ.ಅಂಬೇಡ್ಕರ್ ಅವರು, ಹಿಂದೆ ಮಹಾರಾಣಿಯ ಹೊಟ್ಟೆಯಲ್ಲಿ ಹುಟ್ಟುತ್ತಿದ್ದ ಮಗು ರಾಜನಾಗುತ್ತಿದ್ದ, ಸಂವಿಧಾನದ ಫಲದಿಂದಇನ್ನು ಮುಂದೆ ಮಹಾರಾಜನು ಮತಪೆಟ್ಟಿಗೆಯಲ್ಲಿ ಹುಟ್ಟುತ್ತಾನೆ ಎಂದು ಹೇಳಿ ಪ್ರಜಾಪ್ರಭುತ್ವದ ಶಕ್ತಿ ತಿಳಿಸಿದ್ದರು. ನಮ್ಮ ದೇಶ, ರಾಜ್ಯ ಆಳುವ ರಾಜನನ್ನು ನಾವೇ ಮತ ಹಾಕುವ ಮೂಲಕ ಆಯ್ಕೆ ಮಾಡುವ ಅಧಿಕಾರ, ಸ್ವಾತಂತ್ರ್ಯ ನಮಗೆ ದೊರಕಿದ್ದು ಅಂಬೇಡ್ಕರ್ ಅವರ ಸಂವಿಧಾನದಿಂದ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಲೆಮಾರಿ, ಅರೆಅಲೆಮಾರಿ ಸಮುದಾಯದ ಜನರ ಪರಿಸ್ಥಿತಿ ಬದಲಾಗಿಲ್ಲ, ಅವರಿನ್ನೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಇಂತಹ ಸಮುದಾಯಗಳಿಗೆ ಹೆಚ್ಚಿನ ಅವಕಾಶ, ಸೌಲಭ್ಯ ಸಿಗಬೇಕು. ಸಂವಿಧಾನದಲ್ಲಿ ತಿದ್ದುಪಡಿ ತಂದು ಅಲೆಮಾರಿ ಸಮುದಾಯದ ಜಾತಿಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸವಲತ್ತುಗಳನ್ನು ಹೆಚ್ಚಾಗಿ ಒದಗಿಸಬೇಕಾಗಿದೆ. ಇದಕ್ಕಾಗಿ ಸಮುದಾಯದವರು ಸಂಘಟಿತರಾಗಿ ಹೋರಾಟ ಮಾಡಿ ಹಕ್ಕು ಪಡೆಯಬೇಕು ಎಂದು ತಿಳಿಸಿದರು.
ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರಕಾಶ್, ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ,
ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿದರು. ಗೃಹ ಸಚಿವರ ವಿಶೇಷಾಧಿಕಾರಿ ಡಾ.ನಾಗಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್‌ಕುಮಾರ್‌ಜೋಗಿ, ಜಂಟಿ ಕರ್ಯದರ್ಶಿ ಡಿ.ಕಮಲ, ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ಕೆ.ಚಿಕ್ಕಣ್ಣ, ವಿ.ಚಿನ್ನಪ್ಪ ಇದ್ದರು.