ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿಯೇ ತಮ್ಮ ಜೀವನದ ಗುರಿಯನ್ನು ನಿರ್ಧರಿಸಿ ಅದನ್ನು ತಲುಪಲು ಶ್ರಮವಹಿಸಿ ಕಲಿತು ಮುನ್ನಡೆಯಿರಿ ಎಂದು ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹಾಗೂ ಜಿಟಿಟಿ ಫೌಂಡೇಷನ್ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ ಎಂಬ ವಿಷಯದ ಕುರಿತು ಗುರುವಾರದಿಂದ ಆರಂಭಗೊಂಡ 30ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮ ಜಗತ್ತಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅರಿತುಕೊಂಡು ಮುನ್ನಡೆಯಬೇಕು. ಆಗ ಮಾತ್ರ ನೀವು ಯಶಸ್ವಿಯಾಗುತ್ತೀರಿ. ಹಾಗಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಕಲಿಯಬೇಕು. ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುಬೇಕು ಹಾಗೂ ಕೈಗಾರಿಕೆಗಳಿಗೆ ಬೇಕಾದ ಕೌಶಲವನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ರಾಜೇಶ್ ಕಾಮತ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ತರಬೇತಿ ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ನಿಮ್ಮಲ್ಲಿ ಏನೇ ಗೊಂದಲಗಳಿದ್ದರೂ ಸಂವಾದದ ಮೂಲಕ ಅಧ್ಯಾಪಕರೊಂದಿಗೆ ಚರ್ಚಿಸಿ ತಮ್ಮ ಗೊಂದಲವನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಟಿಟಿ ಫೌಂಡೇಷನ್‌ನ ಮ್ಯಾನೇಜರ್ ಪವನ್‌ಕುಮಾರ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರದೀಪ್, ಕಾರ್ಯಕ್ರಮದ ಸಂಯೋಜಕ ಡಾ. ಯೋಗಾನಂದ್, ಪ್ರಾಧ್ಯಾಪಕ ಡಾ.ಜಿ.ಎಸ್ ಶೇಷಾದ್ರಿ, ಸಹಾಯಕ ಪ್ರಧ್ಯಾಪಕ ಲಿಖಿತ್, ಪ್ರಿಯಾಂಕ ಎಂ.ಎನ್, ಸೌಮ್ಯ ಕೆ.ಆರ್, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಹಾಜರಿದ್ದರು.