ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರ ಬೀಸು ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಇಲ್ಲವೇ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.
ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗಿದೆ. ಈ ಅನ್ಯಾಯವನ್ನು ತಪ್ಪಿಸಲಿಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹಿಂದಿನ ಎರಡು ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲಾಗಿತ್ತು ಎಂದರು.
ಇದೇ ವೇಳೆ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80ರಿಂದ 91, ಬಿಹಾರದ ಸಂಖ್ಯೆ 40ರಿಂದ 50, ಮಧ್ಯಪ್ರದೇಶದ ಸಂಖ್ಯೆ 29ರಿಂದ 33ಕ್ಕೆ ಏರಿಕೆಯಾಗಲಿದೆ. ಇದನ್ನು ಅನ್ಯಾಯ ಎನ್ನದೆ ನ್ಯಾಯ ಎನ್ನಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಈ ಅನ್ಯಾಯವನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಕ್ಷೇತ್ರ ಮರುವಿಂಗಡಣೆಯಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂದರೆ ಒಂದೋ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಜನಸಂಖ್ಯೆಯ ಮಾನದಂಡವನ್ನು ಕೈಬಿಟ್ಟು ಈಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.