ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಹೊಸದಾಗಿ 5,800 ಬಸ್‌ಗಳ ಸೇರ್ಪಡೆಗೆ ಅನುಮೋದನೆ ನೀಡಲಾಗಿದ್ದು, ಈವರೆಗೆ 4,891 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಮೂಲಕ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಖಕರ ಮತ್ತು ಆರಾಮದಾಯಕವಾಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ನಾಡಿನ ಮಹಿಳೆಯರಿಗೆ ಮಾತ್ರವಲ್ಲ ಸಾರಿಗೆ ಸಂಸ್ಥೆಗಳಿಗೂ ವರದಾನವಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದುಪ್ಪಟ್ಟಾಗಿದ್ದು, ಈ ಹಿನ್ನೆಲೆ ಹೊಸದಾಗಿ ಬಸ್‌ಗಳನ್ನು ಖರೀದಿಸುವ ಜೊತೆಗೆ ಟ್ರಿಪ್‌ಗಳ ಪ್ರಮಾಣವು ಹೆಚ್ಚಳ ಮಾಡಲಾಗಿದೆ ಎಂದರು.
ಶಕ್ತಿ ಯೋಜನೆ ಜಾರಿಗೆ ಮುನ್ನ ಪ್ರತಿದಿನ ಕಾರ್ಯಾಚರಣೆಗೊಳಿಸುತ್ತಿದ್ದ 1,54,955 ಟ್ರಿಪ್‌ಗಳ ಪ್ರಮಾಣವು 1,76,787 ಕ್ಕೆ ಜಾಸ್ತಿಯಾಗಿದೆ. ಪ್ರತಿದಿನ 21,832 ಹೆಚ್ಚುವರಿ ಟ್ರಿಪ್‌ಗಳ ಕಾರ್ಯಾಚರಣೆಯಾಗುತ್ತಿದೆ ಎಂದು ಹೇಳಿದರು.
ಈ ಮೂಲಕ ನಾಡಿನ ಮಹಿಳೆಯರಿಗೂ ಅನುಕೂಲವಾಗಿರುವ, ಸಾರಿಗೆ ಸಂಸ್ಥೆಗಳಿಗೂ ಲಾಭ ತಂದುಕೊಡುತ್ತಿರುವ ಶಕ್ತಿ ಯೋಜನೆ ರಾಜ್ಯದಲ್ಲಿ ಸಂಪರ್ಕ ಕ್ರಾಂತಿ ಸೃಷ್ಟಿಸಿದೆ ಎಂದರು.
ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್‌ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ ಎಂದು ತಿಳಿಸಿದರು.
ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯು ಹೆಚ್ಚಾಗಿದೆ. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿನ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡುವುದರ ಜೊತೆಗೆ 2,000 ಚಾಲಕ ಕಂ ನಿರ್ವಾಹಕರು ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಆದೇಶಿಸಲಾಗಿದೆ ಎಂದರು.


