ಇದೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. 59ನೇ ವಾರ್ಡ್ ನ ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಕೊನೆಯ ಅವಧಿಗೆ ಇಂದು ಮೇಯರ್ ಚುನಾವಣೆ ನಡೆಯಿತು. ಬಿಜೆಪಿ ಸದಸ್ಯೆ ಸುನಂದ ಪಾಲನೇತ್ರ, 32ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಎಚ್.ಎಂ.ಶಾಂತಕುಮಾರಿ, 37ನೇ ವಾರ್ಡ್ ಜೆಡಿಎಸ್ ಸದಸ್ಯೆ ಅಶ್ವಿನಿ ಆರ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಚುನಾವಣೆ ನಡೆದಾಗ ಬಿಜೆಪಿ ಸುನಂದ ಪಾಲನೇತ್ರ 26 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾದರು. ಕಾಂಗ್ರೆಸ್ ಸದಸ್ಯೆ ಶಾಂತಕುಮಾರಿ 22 ಮತಗಳನ್ನು ಪಡೆದರು. ಬಿಜೆಪಿಯ ಸುನಂದ ಆಯ್ಕೆಯನ್ನು ಘೋಷಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ’ ಎಂದು ಸಭಾತ್ಯಾಗ ಮಾಡಿದರು.
ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ತಟಸ್ಥವಾಗಿದ್ದರು ಎಂದು ಹೇಳಲಾಗಿದೆ. ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಪತಾಕೆ ಹಾರಿಸಿದೆ.
ಮೈಸೂರು ಪಾಲಿಕೆಯ ನೂತನ ಮೇಯರ್ ಅವರನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಹಳ ವರ್ಷಗಳ ಬಳಿಕೆ ಮೊದಲ ಬಾರಿಗೆ ಬಿಜೆಪಿ ಸದಸ್ಯರೊಬ್ಬರು ಮೇಯರ್ ಆಯ್ಕೆ ಆಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್.ಟಿ.ಸೋಮಶೇಖರ್, ಇಲ್ಲಿ ಯಾವ ಹೊಂದಾಣಿಕೆಯೂ ಇಲ್ಲ. ಬಿಜೆಪಿ ಅಧಿಕಾರ ಹಿಡಿದಿದೆ. ಇದಕ್ಕಾಗಿ ಜನತಾ ದಳದ ಮುಖಂಡರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಷರತ್ತು ವಿಧಿಸಿತ್ತು. ಇದಕ್ಕೆ ಕಾಂಗ್ರೆಸ್ ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಜೆಡಿಎಸ್ ತಟಸ್ಥ ನೀತಿ ಅನುಸರಿಸುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


