Friday, October 18, 2024
Google search engine
Homeಮುಖಪುಟಕೇಂದ್ರ ಸಚಿವ ನಾರಾಯಣ ರಾಣೆ ಬಂಧನ - ಎಫ್ಐಆರ್ ರದ್ದತಿ ಕೋರಿ ಹೈಕೋರ್ಟ್ ಗೆ ಅರ್ಜಿ

ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ – ಎಫ್ಐಆರ್ ರದ್ದತಿ ಕೋರಿ ಹೈಕೋರ್ಟ್ ಗೆ ಅರ್ಜಿ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ರತ್ನಗಿರಿ ಪೊಲೀಸರು ಬಂಧಿಸಿದ್ದಾರೆ. ರಾಣೆ ಬಂಧನಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ ರಾಯಗಡದ ಮಹದ್ ನಗರದ ಹಾಲ್ ನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ “ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷಗಳಾಗಿದೆ ಎಂಬುದು ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಗೊತ್ತಿಲ್ಲ. ಇದು ನಾಚಿಕೆಗೇಡು. ನಾನು ಅಲ್ಲಿದ್ದರೆ ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ” ಎಂದು ಹೇಳಿದ್ದರು.

ರತ್ನಗಿರಿ ಸಂಗಮೇಶ್ವರದಲ್ಲಿ ರಾಣೆ ಅವರನ್ನು ನಾಸಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ರಾಣೆ ಬಂಧನಕ್ಕೂ ಮೊದಲು ರಾಣೆ ಪರ ವಕೀಲರು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡುವಂತೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜೊತೆಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರಾಣೆ ಪರ ವಕೀಲರು ಸಲ್ಲಿಸಿದರು. ಆದರೆ ಜಿಲ್ಲಾ ಸೆಷನ್ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ನಿರಾಕರಿಸಿದರು.

ನಾರಾಯಣ ರಾಣೆ ಮತ್ತು ಇತರರ ವಿರುದ್ದ ಐಪಿಸಿ ಕಲಂ 153 ಗಲಭೆಗೆ ಪ್ರಚೋದನೆ, ಕಲಂ 159, ಕಲಂ 505 ಅಪರಾಧಿಕ ಬೆದರಿಕೆ ಪ್ರಕರಣಗಳನ್ನು ನಾಸಿಕ್ ಸೈಬರ್ ಪೊಲೀಸರು ಮತ್ತು ಪುಣೆ ಪೊಲೀಸರು ದಾಖಲಿಸಿದ್ದಾರೆ.

ಈ ನಡುವೆ ಸಚಿವ ನಾರಾಯಣ ರಾಣೆ ನಿವಾಸದ ಎದುರು ಪ್ರತಿಭಟನೆಗಳು ನಡೆದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ನಿವಾಸದ ಸುತ್ತಮುತ್ತ ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಶಿವಸೇನೆ ಬೆಂಬಲಿಗರು ರಾಣೆ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಬೆಂಬಲಿಗರೊಂದಿಗೆ ಘರ್ಷಣೆ ನಡೆದಿದೆ. ಪರಸ್ಪರ ಕಲ್ಲುಗಳನ್ನು ತೂರಿಕೊಂಡಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಶಿವಸೇನೆ ಬೆಂಬಲಿಗರು ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ಲೇಕಾರ್ಡ್ ಗಳನ್ನು ಹಿಡಿದು ರಾಣೆ “ಕೋಳಿಕಳ್ಳ” ಚಂಬೂರ್ ಪಾಲದಲ್ಲಿ ಐದು ದಶಕಗಳ ಕಾಲ ಪೌಲ್ಟ್ರಿ ಫಾರಂ ನಡೆಸಿದ್ದಾರೆ ಎಂದು ದೂರಿದ್ದಾರೆ. ಪುಣೆ, ನಾಗ್ಪುರದಲ್ಲೂ ನಾರಾಯಣ ರಾಣೆ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ಅಮರಾವತಿ ಸಿಟಿ ರಾಜಪಥ ಪ್ರದೇಶದಲ್ಲಿರುವ ಬಿಜೆಪಿ ಕಚೇರಿಯನ್ನು ಶಿವಸೇನೆ ಬೆಂಬಲಿಗರು ಧ್ವಂಸ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

‘ನಾನು ಯಾವುದೇ ಅಪರಾಧ ಮಾಡಿಲ್ಲ. ನಾನೇಕೆ ವಿಷಾದ ವ್ಯಕ್ತಪಡಿಸಬೇಕು ಎಂದು ಮಾಧ್ಯಮಗಳ ವಿರುದ್ಧ ಮಂಗಳವಾರ ರಾಣೆ ಗುಡುಗಿದ್ದರು. ಟಿವಿಯಲ್ಲಿ ಏನು ಬರುತ್ತಿದೆ ಎಂಬುದನ್ನು ಮಾಧ್ಯಮಗಳು ಪರಿಶೀಲಿಸಲಿ. ಉತ್ಪ್ರೇಕ್ಷೆ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದರು.

ಘಟನೆಯ ವಿರುದ್ಧ ರಾಜ್ಯಸಭಾ ಸದಸ್ಯ ನಾರಾಯಣ ರಾಣೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಸ್.ಎಸ್. ಸಿಂಧೆ ಮತ್ತು ನ್ಯಾಯಮೂರ್ತಿ ಎನ್.ಜೆ.ಜಾಮದಾರ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು ತನ್ನ ವಿರುದ್ಧ ದಾಖಲಾಗಿರುವ ಹಲವು ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿದ್ದಾರೆ.

ರಾಣೆ ಬಂಧನಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರೋಟೋಕಾಲ್ ಉಲ್ಲಂಘನೆ. ರಾಜ್ಯದ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular