ಕಾಂಗ್ರೆಸ್ ಪಕ್ಷ ಖಾಸಗೀಕರಣದ ವಿರುದ್ಧವಾಗಿಲ್ಲ. ಆದರೆ ರೈಲ್ವೆ ಸೇರಿದಂತೆ ಇತರೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ನಮ್ಮ ಖಾಸಗೀಕರಣ ಯೋಜನೆಯು ಒಂದು ತರ್ಕವನ್ನು ಹೊಂದಿದೆ. ನಾವು ಕಾರ್ಯತಂತ್ರದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಿಲ್ಲ ಮತ್ತು ನಾವು ರೈಲ್ವೆಯನ್ನು ಕಾರ್ಯತಂತ್ರದ ಉದ್ಯಮವೆಂದು ಪರಿಗಣಿಸುತ್ತೇವೆ. ಏಕೆಂದರೆ ಅದು ಲಕ್ಷಾಂತರ ಜನರ ಪ್ರಯಾಣಕ್ಕೆ ಸಹಕಾರಿಯಾಗಿದೆ. ಸಾಕಷ್ಟು ಜನರಿಗೆ ಉದ್ಯೋಗವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ನಾವು ನಿರಂತರವಾಗಿ ನಷ್ಟದಲ್ಲಿರುವ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದ್ದೇವೆ. ಕನಿಷ್ಟ ಮಾರುಕಟ್ಟೆ ಪಾಲವನ್ನು ಹೊಂದಿರುವ ಕಂಪನಿಗಳನ್ನು ನಾವು ಖಾಸಗೀಕರಗೊಳಿಸಿದ್ದೇವೆ. ನಿರ್ದಿಷ್ಟ ವಲಯದಲ್ಲಿ ಖಾಸಗಿ ವಲಯದ ಏಕಸ್ವಾಮ್ಯವನ್ನು ಪರಿಶೀಲಿಸುವ ಸಾಮರ್ಥ್ಯ ಹೊಂದಿರುವ ಸರ್ಕಾರಿ ಉದ್ದಿಮೆಗಳನ್ನು ನಾವು ಖಾಸಗೀಕರಣಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 70 ವರ್ಷಗಳಿಂದ ಭಾರತದಲ್ಲಿ ಏನೂ ನಡೆದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಈಗ 70 ವರ್ಷಗಳಲ್ಲಿ ಸೃಷ್ಟಿಯಾದ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಒಕ್ಕೂಟ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರವು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ರಾಷ್ಟ್ರೀಯ ಹಣಗಳಿಕೆಯ ಪೈಪ್ ಲೈನ್ ಮೂಲಕ ಲಾಭ ಪಡೆಯಲು ಬಯಸಿದೆ ಎಂದು ಆಪಾದಿಸಿದ್ದಾರೆ.
ಮೋದಿ ಸರ್ಕಾರದ ಖಾಸಗೀಕರಣ ಯೋಜನೆ ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ಅದು ಉದ್ಯೋಗಗಳನ್ನು ಇಲ್ಲದಂತೆ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ನೀತಿಗಳ ವಿರುದ್ಧ ಹರಿಹಾಯ್ದಿದ್ದಾರೆ. 70 ವರ್ಷಗಳಲ್ಲಿ ನಿರ್ಮಿಸಿದ ಸ್ವತ್ತುಗಳನ್ನು ಮಾರಾಟ ಮಾಡುವುದೇ ಏಕೈಕ ಗುರಿಯಲ್ಲ ಎಂದು ಟೀಕಿಸಿದರು.
ಮಧ್ಯಸ್ಥಗಾರರನ್ನು ಸಂಪರ್ಕಿಸದೆ ಮತ್ತು ಗುರಿಗಳನ್ನು ಹೊಂದದೆ ಸರ್ಕಾರ ಈ ಬೃಹತ್ ಕಸರತ್ತನ್ನು ನಡೆಸುತ್ತಿದೆ ಎಂದು ಹೇಳಿದರು.