ಕೆ ಬಿ ಸಿದ್ದಯ್ಯ ಅವರ ಕಾವ್ಯವನ್ನು ಕಾಣಲು ಅದರದ್ದೇ ಆದ ಕಣ್ಣುಗಳು ಬೇಕು ಎಂದು ಕಣ್ಣು ಧರಿಸಿ ಕಾಣಿರೋ ಎಂದು ನಂತರದಲ್ಲಿ ಇತಿಹಾಸದ ಪುಟಗಳಲ್ಲಿ ಮರೆಮಾಚಲಾಗಿದ್ದ ಕುರಂಗರಾಜನ ಕುರಿತು ದಾಖಲೆಗಳನ್ನು ನೀಡುತ್ತಾ ಸಂಶೋಧನಾ ಕೃತಿಯನ್ನು ನೀಡಿ ಈಗ ಸೃಜನಶೀಲ ಸಾಹಿತ್ಯವಾದ ಕಥೆಗಳ ಮೂಲಕ ರವಿಕುಮಾರ್ ನೀಹ ಅವರು ದಲಿತ ಲೋಕದ ದರ್ಶನವನ್ನು ಕಥೆಗಳಲ್ಲಿ ಕಾಣಿಸುತ್ತಿದ್ದಾರೆ ಎಂದು ಯುವ ವಿಮರ್ಶಕ ನವೀನ್ ಪೂಜಾರಳ್ಳಿ ಹೇಳಿದರು
ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಡಾ.ರವಿಕುಮಾರ್ ನೀ.ಹ ಅವರ ಅವು ಅಂಗೇ ಕೃತಿಯ ಕುರಿತು ಮಾತನಾಡಿದ ಅವರು ವಿಮರ್ಶೆಯ ಹಾದಿಯಿಂದ ಬಂದ ನೀಹ ಅವರು ಕಥೆಗಳ ಮೂಲಕವೇ ಕಥೆಗಾರರು ಕಟ್ಟಬೇಕಿರುವ ಕಥೆಗಳು ಯಾವುವು ಯಾವ ರೀತಿಯ ಕಥೆಗಳನ್ನು ಹೇಳಬೇಕು ಎಂದು ಕಥೆಗಳ ಬಾಯಿಂದಲೇ ಹೇಳಿಸುತ್ತಾರೆ ಎಂದರು.
ಇಡೀ ಕಥೆಗಳು ಕುಟುಂಬ, ಆಹಾರ ಪ್ರೀತಿ, ಕೂಡುವಿಕೆ, ಜಾತಿ ಕ್ರೌರ್ಯ, ಅಸಮಾನತೆ, ಸಂಬಂಧದ ಸೆಳೆತದ ತೀವ್ರತೆಗಳನ್ನು ಕಟ್ಟಿಕೊಡುತ್ತವೆ ಎಂದು ಹೇಳಿದರು.
ಅವು ಅಂಗೇ ಕಥಾ ಸಂಕಲನ ಕನ್ನಡ ಕಥಾ ಲೋಕವನ್ನು ವಿಸ್ತರಿಸುತ್ತದೆ. ಈ ಕಥೆಗಳಲ್ಲಿ ಸಶಕ್ತ ಸ್ತ್ರೀ ಪಾತ್ರಗಳನ್ನು ಕಾಣಿಸುತ್ತಾರೆ. ಸರ್ಕಾರಿ ಸ್ಥಳಗಳಲ್ಲಿ ನಡೆಯುವ ಜಾತಿ ಅಸಮಾನತೆ ಅವಮಾನಗಳನ್ನು ಅವು ಅಂಗೇ ಕಥೆ ನಮಗೆ ಕಾಣಿಸುತ್ತದೆ. ಇಂದಿಗೂ ದಲಿತ ಸರ್ಕಾರಿ ನೌಕರರು ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಅನೇಕರ ಕಣ್ಣನ್ನು ಕುಕ್ಕುತ್ತದೆ. ಇಲ್ಲಿನ ಕಥೆಗಳನ್ನು ಓಮ್ಮೆ ಓದಿ ಸುಮ್ಮನಾಗಲು ಸಾಧ್ಯವಿಲ್ಲ ನಮ್ಮನ್ನು ಕಾಡುವ ಕಥೆಗಳಿವು ಎಂದು ಅಭಿಪ್ರಾಯಪಟ್ಟರು.
ಈ ಕಥೆಗಳನ್ನು ಹೆಚ್ಚು ಓದುವ ಮೂಲಕ ಜಾತಿ ಅಸಮಾನತೆಗಳು ಕಡಿಮೆಯಾಗಲಿ. ನೀಹ ಅವರಿಂದ ಇನ್ನೂ ಹೆಚ್ಚಿನ ಕಥೆಗಳು ಕಾದಂಬರಿಗಳು ಬರಲಿ ಎಂಬದು ನಮ್ಮೆಲ್ಲರ ಅಭಿಲಾಷೆ ಎಂದು ನವೀನ್ ಪೂಜಾರಳ್ಳಿ ತಿಳಿಸಿದರು.