Sunday, February 16, 2025
Google search engine
Homeಮುಖಪುಟ'ತೊಂಭತ್ತರ ನಂತರ ಬಾಬ್ರಿ ಮಸೀದಿ ಬಿದ್ದ ಮೇಲೆ ಭಾರತದ ಟೆಂಪಲ್ ನೆರೇಟೀವ್ ಭಿನ್ನವಾಗಿದೆ' - ಡಾ.ಹರೀಶ್...

‘ತೊಂಭತ್ತರ ನಂತರ ಬಾಬ್ರಿ ಮಸೀದಿ ಬಿದ್ದ ಮೇಲೆ ಭಾರತದ ಟೆಂಪಲ್ ನೆರೇಟೀವ್ ಭಿನ್ನವಾಗಿದೆ’ – ಡಾ.ಹರೀಶ್ ಗಂಗಾಧರ್ 

ತೊಂಭತ್ತರ ನಂತರ ಬಾಬ್ರಿ ಮಸೀದಿ ಬಿದ್ದ ಮೇಲೆ ಭಾರತದ ಟೆಂಪಲ್ ನೆರೇಟೀವ್ ಭಿನ್ನವಾಗಿದೆ. ಸಮುದಾಯಗಳ ಮಂದಿರ ನಿರಾಕರಣೆ, ದೈವವನ್ನು ಹೊಸದಾಗಿ, ಬದುಕಿನ ಭಾಗವಾಗಿ ನೋಡುವ ಅಗತ್ಯವನ್ನು ಈ ಕತೆಗಳು ವಿವರಿಸುತ್ತವೆ ಎಂದು ಚಿಂತಕ ಡಾ.ಹರೀಶ್ ಗಂಗಾಧರ್ ಹೇಳಿದರು.

ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಡಾ.ರವಿಕುಮಾರ್ ನೀ.ಹ. ಬರೆದಿರುವ ಅವು ಅಂಗೇ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 90ರ ದಶಕದ ನಂತರ ಭಾರತೀಯ ಸನ್ನಿವೇಶದಲ್ಲಿ ದೇವಸ್ಥಾನಗಳ ನಿರ್ಮಾಣ ಭಿನ್ನವಾದಂತ ಸಾಮಾಜಿಕ ಸನ್ನಿವೇಶವನ್ನು ಅನಾವರಣಗೊಳಿಸುತ್ತಿದೆ ಎಂದರು.

ದೇವಸ್ಥಾನ ಕಟ್ಟುವುದು ಮತ್ತು ವೈಚಾರಿಕತೆಯಿಂದ ಎದುರಾಗುವುದು ದೇವರನ್ನು ನಿರಾಕರಿಸುವುದು ಈ ಎಲ್ಲ ಪ್ರಶ್ನೆಗಳ ಮೂಲಕ ಸಮಾಜದಿಂದ ದೂರವಾಗುತ್ತಿರುವ ತಲೆಮಾರು ತನ್ನ ಬೇರುಗಳನ್ನು ತಾನೇ ಕಳೆದುಕೊಳ್ಳುತ್ತಿದೆ. ಇಂಥ ಪ್ರಶ್ನೆಗಳನ್ನ ನೀಹ ಆವರ ಕಥಾ ಸಂಕಲನ ಎದುರಿಸುತ್ತಿದೆ ಎಂದು ಹೇಳಿದರು.

ಇಲ್ಲಿ ದೇವಸ್ಥಾನವನ್ನು ಕಟ್ಟಲಾಗುತ್ತಿದೆ, ಆಚರಣೆಗಳಿವೆ. ಅದೇ ಹೊತ್ತಿನಲ್ಲಿ ಅಸ್ಪೃಶ್ಯತೆಯ ಅವಮಾನಗಳಿವೆ. ಅವುಗಳನ್ನು ಮೀರಬೇಕೆ?ಎನ್ನುವ ಪ್ರಶ್ನೆಯ ಜೊತೆ ದಾಟುವ ಕನಸುಗಾರಿಕೆಯಿದೆ. ಆ ದಾರಿಯಲ್ಲಿ ನಡೆಯುವ ಸೂಚನೆಗಳಿವೆ. ವೈಚಾರಿಕ ಅಪಾಯದಿಂದ ಪಾರಾಗಿ ಮುಗ್ಧವಾದ ಲೋಕವೊಂದನ್ನು ಕಟ್ಟುವ ಹೊಣೆಗಾರಿಕೆಯನ್ನು ಈ ಕೃತಿ ಹೊತ್ತಿದೆ ಎಂದು ತಿಳಿಸಿದರು.

ಅವು ಅಂಗೆ ತನ್ನ ಕಾಲಘಟ್ಟದ ಸಂಕಟದ ಜೊತೆಗೆ ಲೋಕ ಜಗತ್ತಿನ ಸತ್ಯಗಳನ್ನು ಹುಡುಕುತ್ತದೆ. ಅದು ಭಾಷೆಯ ಗಡಿಗಳನ್ನು ಮೀರಿ,  ಪ್ರದೇಶದ ಗಡಿಗಳನ್ನು ಮೀರಿ,  ರಷ್ಯನ್ ತಮಿಳ್ ಇತ್ಯಾದಿ ಕಥನ ಕಲೆಯ ಭಾಗವಾಗಿ ಕಟ್ಟಿಕೊಂಡಿದೆ. ಇಲ್ಲಿ ನೀಹ ಯಾವುದೇ ವೈಚಾರಿಕ ಭ್ರಮೆಗಳಿಂದ ಕಥೆಗಳನ್ನು ಕಟ್ಟಿಲ್ಲ. ಮುಗ್ಧವಾದ ಲೋಕವನ್ನು ಮುಗ್ಧವಾದ ಕಣ್ಣುಗಳ ಮೂಲಕವೇ ನೋಡಿದ್ದಾರೆ. ಮತ್ತು ಓದುಗರಿಗೂ ನೋಡುವಂತೆ ತೋರಿದ್ದಾರೆ. ಈ ಕಥೆಗಳಲ್ಲಿ ಬರುವ ನಿರೂಪಣೆ ಹೊಸದೇ ಎಂಬಂತೆ ಕಟ್ಟಿಕೊಂಡಿದೆ. ಕಥೆಗಳೊಳಗೆ ಕಥೆಗಳು, ಪಾತ್ರಗಳು, ಸನ್ನಿವೇಶಗಳು, ಆಚರಣೆಗಳು, ನಂಬಿಕೆಗಳು ಕಟ್ಟಿಕೊಳ್ಳುವ ಮಾನವೀಯ ಜಗತ್ತು. ಇವೆಲ್ಲ ಇಡೀ ಕಥನವನ್ನು ಶ್ರೀಮಂತಗೊಳಿಸಿದೆ ಮತ್ತು ಮುಂದೆ ಲೋಕ ಎಂಬುದರ ಬಗೆಗಿನ ವಿವರಣೆಯನ್ನು ವಿಭಿನ್ನವಾಗಿ ಹುಡುಕಿಕೊಳ್ಳಲು ಯತ್ತಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕತೆಗಾರನೊಬ್ಬ ತನ್ನ ಕಥೆಯ ಮೂಲಕ ಯಾವ ಲೋಕ ಸತ್ಯವನ್ನು ಕಟ್ಟುತ್ತಿದ್ದಾನೆ ಮತ್ತು ಯಾವ ಲೋಕ ಸತ್ಯವನ್ನು ನೋಡುತ್ತಿದ್ದಾನೆ ಎಂಬ ಬಹುಮುಖ್ಯ ಚರ್ಚೆ ಇವರ ಕಥೆಗಳಲ್ಲಿ ಕಾಣಬಹುದು ಎಂದು ತಿಳಿಸಿದರು.

ಕಥಾ ಸಂಕಲನದ ಕರ್ತೃ ಡಾ.ರವಿಕುಮಾರ್ ನೀ.ಹ. ಡಾ.ಹನುಮಂತರಾಯಪ್ಪ ಪಾಲಸಂದ್ರ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular