ದಲಿತ ಸಮುದಾಯಕ್ಕೆ ಸೇರಿದ ಪಾವಗಡ ಶಾಸಕ ವೆಂಕಟೇಶ್ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಿದರೆ ಇವರಿಗೆ ಇಷ್ಟೊಂದು ಕೋಪವೇಕೆ? ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಗೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಟಾಂಗ್ ನೀಡಿದರು.
ಮಧುಗಿರಿಯಲ್ಲಿ ತುಮುಲ್ ಉಪ ಕಚೇರಿ ಪೂಜಾ ಕಾರ್ಯಕ್ರಮ ಹಾಗೂ ನೂತನ ನಿರ್ದೇಶಕ ಬಿ. ನಾಗೇಶ್ ಬಾಬು ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಚಿಕ್ಕನಾಯಕನಹಳ್ಳಿಯ ಮಾಜಿ ಸಚಿವರು, ಸಚಿವ ರಾಜಣ್ಣನವರ ಬಗ್ಗೆ ನಾಲಾಯಕ್ ಎಂದು ಹೇಳಿಕೆ ನೀಡಿದ್ದು, ಇದೇ ಬಿಜೆಪಿಯವರು ಸೋಮಶೇಖರ್ ಮತ್ತು ಬಾಲಚಂದ್ರ ಜಾರಕಿಹೊಳಿಯವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರಾಗಿ ಮಾಡಿದ್ದರು. ಈ ಸಂದರ್ಭದಲ್ಲಿ ಮೌನ ವಹಿಸಿದ್ದ ಮಾಜಿ ಸಚಿವರಿಗೆ ರೈತರ ಕಪಾಳಕ್ಕೆ ಹೊಡೆದಂತೆ ಆಗಲಿಲ್ಲವಾ.?
ಶಾಸಕ ವೆಂಕಟೇಶ್ ಅವರನ್ನು ನಾಮ ನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ದಲಿತರನ್ನು ಅಧ್ಯಕ್ಷರಾಗಿ ಮಾಡಿದರೆ ನಿಮಗೆ ಇಷ್ಟೊಂದು ಕೋಪವೇಕೆ? ನೀವು ಹಿರಿಯರಿದ್ದೀರಾ ಎಂಬ ಹಿನ್ನೆಲೆಯಲ್ಲಿ ನಿಮಗೆ ಗೌರವ ನೀಡುತ್ತಿದ್ದೇವೆ. ನಿಮ್ಮ ತಾಲೂಕಿನಲ್ಲಿ ನಿರ್ದೇಶಕರನ್ನು ಗೆಲ್ಲಿಸಲು ನೀವೆಷ್ಟು ಶ್ರಮ ಹಾಕಿದ್ದೀರಿ. ಕಾನೂನು ಪಂಡಿತರಾದ ನಿಮ್ಮ ದುರಹಂಕಾರದಿಂದ ನಿಮ್ಮ ಕ್ಷೇತ್ರದ ಜನತೆಯೇ ನಿಮ್ಮನ್ನು ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಅವರಿಗೆ ಟಾಂಗ್ ನೀಡಿದರು.
ನಮ್ಮ ಪಕ್ಷದ ಗುಬ್ಬಿ ಶಾಸಕರು ದಲಿತರ ಬಗ್ಗೆ ಕಾಳಜಿ ಇರುವಂತೆ ಮಾತನಾಡಿದ್ದು, ತುಮುಲ್ ನಿರ್ದೇಶಕರ ಚುನಾವಣೆಯಲ್ಲಿ ನಿಮ್ಮ ಮನೆಯವರನ್ನು ನಿಲ್ಲಿಸದೇ ದಲಿತರೊಬ್ಬರನ್ನು ನಿಲ್ಲಿಸಿದ್ದರೆ ಆಗ ನಿಮ್ಮ ದಲಿತರ ಬಗೆಗಿನ ಕಾಳಜಿ ಮೆಚ್ಚುತ್ತಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಆಗಲೀ ಮತ್ತು ಸಚಿವ ರಾಜಣ್ಣನವರಾಗಲಿ ನಿಮ್ಮ ಮನೆಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದರಾ? ನೀವು ನನ್ನ ಚುನಾವಣೆಗೆ ಶ್ರಮಿಸಿದ್ದೇನೆ ಎಂದು ಹೇಳಿಕೆ ನೀಡಿದ್ದೀರಿ. ನಾನೂ ಸಹ ನಿಮ್ಮ ಪರವಾಗಿ ಪ್ರಚಾರ ನಡೆಸಿದ್ದೇನೆ. ದಲಿತರು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ನಿಮಗೆ ತಡೆಯಲು ಸಾಧ್ಯವಾಗದೇ ಹೀಗೆಲ್ಲ ಮಾತನಾಡುತ್ತಿದ್ದೀರಾ, ವಾಸುರವರು ನನಗೆ ಉತ್ತಮ ಸ್ನೇಹಿತರು ಎಂಬ ಹಿನ್ನೆಲೆಯಲ್ಲಿ ಅವರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮ ಮಾತುಗಳನ್ನು ಇಲ್ಲಿಗೇ ನಿಲ್ಲಿಸಿ, ನೀವು ಹೆಚ್ಚು ಮಾತನಾಡಿದಷ್ಟು, ನಿಮ್ಮ ತಾಲೂಕಿನಲ್ಲೇ ನಿಮಗೆ ಹೆಚ್ಚು ಅನಾನುಕೂಲವಾಗುತ್ತದೆ ಎಂದು ಶ್ರೀನಿವಾಸ್ ಗೆ ಕುಟುಕಿದರು.