ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಡಿಸಿ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವ ಮುನ್ನ ಜನರು ಆಲೋಚಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಖರ್ಚು-ವೆಚ್ಚಗಳು ಇತಿ-ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ನಿಂದ ತಾವು ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶವಿದ್ದು, ಮಹಿಳೆಯರು ಈ ಸೌಲಭ್ಯವನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ಇದರಿಂದ ಸಾಲದ ಶೂಲಕ್ಕೆ ಸಿಲುಕುವುದು ತಪ್ಪುತ್ತದೆ ಎಂದು ತಿಳಿಸಿದರು.
ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗುವುದು. ಬುಧವಾರ ಮೈಕ್ರೋ ಫೈನಾನ್ಸ್ ಕಂಪನಿಗಳೊಂದಿಗೆ ಸಭೆ ನಡೆಸಿ ಕಂಪನಿಯ ಲಾಭಕ್ಕಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಿರದ ಮುಗ್ಧರಿಗೆ ಸಾಲ ನೀಡಬಾರದು. ಜಿಲ್ಲೆಯಲ್ಲಿ ಸಾಲ ನೀಡಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ಮೈಕ್ರೋ ಫೈನಾನ್ಸ್ ಕಂಪನಿಗಳು ಜಿಲ್ಲೆಯಲ್ಲಿ 64 ಕೋಟಿ ರೂ.ಗಳ ಸಾಲವನ್ನು ನೀಡಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಹೆಚ್ಚು ಸಾಲ ನೀಡಿಕೆಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಮುಂದಾಲೋಚನೆಯಿಲ್ಲದೆ ಯಾರೂ ಸಾಲ ಮಾಡಬಾರದು ಎಂದು ಮನವಿ ಮಾಡಿದರಲ್ಲದೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವ-ಸಹಾಯ ಗುಂಪಿನಿAದ ಸಾಲ ಪಡೆದು ಆರ್ಥಿಕ ಅಭಿವೃದ್ಧಿ ಹೊಂದುವ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಸಾಲ ತೀರಿಸಲಾಗದೆ 30 ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಮಂಗಳಮ್ಮ ಅವರ ಮನೆಗೆ ಭೇಟಿ ನೀಡಿ ಅವರ ಮಗನಿಂದ ಮಾಹಿತಿ ಪಡೆದರು.