ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೀಡಿದ್ದ ಅರಣ್ಯ ಖಾತೆಯನ್ನು ವಹಿಸಿಕೊಳ್ಳಲು 15 ದಿನ ಸತಾಯಿಸಿದ್ದ ಸಚಿವ ಆನಂದ್ ಸಿಂಗ್ ಕೊನೆಗೂ ಅಧಿಕಾರ ಸ್ವೀಕರಿಸಿದ್ದಾರೆ. ನನ್ನ ಮನವಿಗೆ ಸ್ಪಂದಿಸುವ ಭರವಸೆ ಸಿಕ್ಕಿರುವುದರಿಂದ ನಾನು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ವಿಧಾನಸೌಧದ ತಮ್ಮ ಕಚೇರಿಗೆ ತೆರಳಿ ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದ ನಂತರ ನಡೆದ ಖಾತೆ ಹಂಚಿಕೆ ಸಂದರ್ಭದಲ್ಲಿ ವಿಜಯನಗರದ ಶಾಸಕ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆಯನ್ನು ನೀಡಿದ್ದರು.
ಇದರಿಂದ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ಅರಣ್ಯ ಖಾತೆಯನ್ನು ವಹಿಸಿಕೊಳ್ಳಲು ಆನಂದ್ ಸಿಂಗ್ ನಿರಾಕರಿಸಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ದೆಹಲಿಯ ಪಕ್ಷದ ವರಿಷ್ಟರನ್ನು ಭೇಟಿಯಾಗಿ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು.
ಮೇಲ್ನೋಟಕ್ಕೆ ಆನಂದ್ ಸಿಂಗ್ ಅವರ ಜೊತೆ ಮುಖ್ಯಮಂತ್ರಿಗಳು ನಡೆಸಿದ ಸಂಧಾನ ಯಶಸ್ವಿಯಾದಂತಿದೆ. ಹೀಗಾಗೊ ಆನಂದ್ ಸಿಂಗ್ ತಾತ್ಕಾಲಿಕವಾಗಿ ತಮ್ಮ ಮನಸ್ಸು ಬದಲಿಸಿದಂತೆ ಕಾಣುತ್ತಿದೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್, “ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನು ಮೊದಲು ಯಶಸ್ವಿಯಾಗಿ ನಿಭಾಯಿಸಿ ಎಂದು ಹೇಳಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಭರವಸೆ ನೀಡಿದ್ದಾರೆ. ನನ್ನ ಮನವಿಗೆ ಸ್ಪಂದಿಸುವ ಭರವಸೆ ಸಿಕ್ಕಿದೆ. ಆದ್ದರಿಂದ ಅಧಿಕಾರ ವಹಿಸಿಕೊಂಡಿದ್ದೇನೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಕೆಲಸ ನಿರ್ವಹಿಸುತ್ತೇನೆ. ನನ್ನ ಭಾವನೆಗಳಿಗೆ ಸಿಎಂ ಸ್ಪಂದಿಸಲಿದ್ದಾರೆ. ಈಗಲೂ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.


