ಭತ್ತದ ತೌಡಿನಿಂದ ಅಡಿಗೆ ಎಣ್ಣೆ ತಯಾರಿಸುವ ಕಾರ್ಖಾನೆಯೊಂದರಲ್ಲಿ ಎಣ್ಣೆ ತುಂಬಿದ್ದ ಬಾಯ್ಲರ್ ಸ್ಪೋಟಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ತುಮಕೂರು ನಗರದ ಅಂತರಸನಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.
ಮೃತ ಕಾರ್ಮಿಕರನ್ನು ಬಿಹಾರ ರಾಜ್ಯದ 22 ವರ್ಷದ ಸಂತೋಷ್ ಮತ್ತು 26 ವರ್ಷದ ಚಂದನ್ ಶರ್ಮಾ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರ ತುಮಕೂರಿನಿಂದ ಶಿರಾಕ್ಕೆ ಹೋಗುವಾಗ ಅಂತರಸಹಳ್ಳಿ ಕೈಗಾರಿಕಾ ಪ್ರದೇಶದ ಬಲಭಾಗದಲ್ಲಿ ನೂರು ಅಡಿ ರಸ್ತೆಯಲ್ಲಿ 4ಪಿ/5ಪಿ ನಿವೇಶನದಲ್ಲಿರುವ ಪರಿಮಳಾ ಆಗ್ರೊ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ದುರ್ಘಟನೆ ಸಂಭವಿಸಿದೆ.
ಸದರಿ ಕಾರ್ಖಾನೆಯಲ್ಲಿ ಭತ್ತದ ಹೊಟ್ಟು, ತೌಡು, ಗೋಧಿ ಹೊಟ್ಟಿನಿಂದ ಅಡಿಗೆ ಎಣ್ಣೆ ತಯಾರು ಮಾಡಲಾಗುತ್ತಿದ್ದು ಘಟನೆ ಸಂಭವಿಸಿದಾಗ ಐದು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಾರ್ಖಾನೆಯಲ್ಲಿ ಎರಡು ಬಾಯ್ಲರ್ ಗಳಿದ್ದು ಒಂದರಲ್ಲಿ ಬಿಸಿ ಎಣ್ಣೆ ತುಂಬಿದ್ದು ಮತ್ತೊಂದು ಖಾಲಿ ಇತ್ತೆಂದು ಹೇಳಲಾಗಿದ್ದು ಖಾಲಿ ಇದ್ದ ಬಾಯ್ಲರ್್ ಮೇಲೆ ಏಣಿ ಹತ್ತಿ ಕೆಲಸದಲ್ಲಿ ತೊಡಗಿದ್ದಾಗ ಎಣ್ಣೆ ತುಂಬಿದ್ದ ಬಾಯ್ಲರ್ ಮುಚ್ಚಳ ದಿಢೀರನೆ ಸ್ಪೋಟಗೊಂಡಿದೆ ಎಂದು ತಿಳಿದುಬಂದಿದೆ.
ಸ್ಪೋಟದ ರಭಸಕ್ಕೆ ಇಬ್ಬರೂ ಕಾರ್ಮಿಕರು ಏಣಿಯಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಂತೋಷ್ ಮತ್ತು ಚಂದನ್ ಶರ್ಮಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಮಾರ್ಗ ಮಧ್ಯೆದಲ್ಲಿಯೇ ಇಬ್ಬರು ಕಾರ್ಮಿಕರು ಮೃತಪಟ್ಟರೆಂದು ತಿಳಿದುಬಂದಿದೆ.
ಈ ಕಾರ್ಖಾನೆ ಅಬ್ದುಲ್ ಖಾದರ್ ಭಾಷಾ, ಯೂನುಲ್ ಭಾಷ ಹಾಗೂ ಬಿ.ಎಸ್.ಶಿವಾನಂದಪ್ಪ ಅವರ ಪಾಲುದಾರಿಕೆಯಲ್ಲಿ ಪ್ರೈವೇಟ್ ಲಿಮಿಟೆಡ್ ಕಂಪನಿ ನೋಂದಣಿಯಾಗಿದ್ದು ಕಾರ್ಖಾನೆಯನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.