ಪತ್ರಕರ್ತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬೇಕಾದರೆ ಪತ್ರಕರ್ತರ ಸಂಘಗಳು ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಆ ಮೂಲಕ ಪತ್ರಿಕಾ ಸ್ವಾತಂತ್ರ, ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಡಾ.ಪಿ.ಸಾಯಿನಾಥ್ ತಿಳಿಸಿದರು.
ತುಮಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 39ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕಾ ಒಕ್ಕೂಟಗಳು ಅವನತಿಯಾದರೆ ಸ್ವತಂತ್ರ ಪತ್ರಿಕೋದ್ಯಮ ಸತ್ತ ಹಾಗೆ. ಆದ್ದರಿಂದ ಪತ್ರಕರ್ತರು ಮತ್ತು ಸಂಘಟನೆಗಳು ಸಂಯುಕ್ತವಾಗಿ ಇಂತಹ ವೇದಿಕೆಗಳ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಸಮ್ಮೇಳನಗಳು, ಕಾರ್ಯಾಗಾರಗಳಲ್ಲಿ, ಪತ್ರಕರ್ತರ ಸಮಸ್ಯೆಗಳ, ಹಕ್ಕು ಬಾಧ್ಯತೆಗಳನ್ನು ಚರ್ಚಿಸಲು ಇಂತಹ ವೇದಿಕೆಗಳು ನಿರಂತರವಾಗಿ ನಡೆಯಬೇಕು. ಪತ್ರಿಕೋದ್ಯಮ ಮತ್ತು ಪತ್ರಕರ್ತರ ನಡುವೆ ಸಾಕಷ್ಟು ವೈರುಧ್ಯವಿದೆ. ಉದ್ಯಮ ಬದಲಾವಣೆಗಳನ್ನು ಕಾಣುತ್ತಿದೆ. ವೃತ್ತಿಪರ ಪತ್ರಕರ್ತರ ಬದುಕು ಹಸನಾಗಲು ಸರಕಾರಗಳನ್ನು ಮನವೊಲಿಸುವ ತೀವ್ರ ಹೋರಾಟಗಳನ್ನು ಸಮ್ಮೇಳನಗಳಲ್ಲಿ ರೂಪಿಸಬೇಕೆಂದು ಸಲಹೆ ನೀಡಿದರು.
ಬಂಡವಾಳ ಶಾಹಿ ಮಾಧ್ಯಮ ದೊರೆಗಳು ಪತ್ರಿಕಾ ಕ್ಷೇತ್ರದ ಹಿಡಿತವನ್ನು ಸಾಧಿಸುತ್ತಿದ್ದಾರೆ. ಇದು ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸವಾಗಿದೆ. ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಕೆಲಸಗಳನ್ನು ಮಾಡಿಸುವುದರ ಮೂಲಕ ಯುವ ಪತ್ರಕರ್ತ ಸಮೂಹದ ಭವಿಷ್ಯವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ತಿಳಿಸಿದರು.
ಸ್ವತಂತ್ರ ಪತ್ರಿಕೋದ್ಯಮವನ್ನು ಮುಕ್ತವಾಗಿ ಆಸ್ವಾದಿಸುವ ಅವಕಾಶಕ್ಕೆ ಸರಕಾರಗಳು ಕೊಡಲಿ ಪೆಟ್ಟು ನೀಡುತ್ತಿವೆ. ಇದು ಅಭಿವೃದ್ದಿ ಪತ್ರಿಕೋದ್ಯಮಕ್ಕೆ ಕತ್ತು ಹಿಸುಕುವ ಕೆಲಸವಾಗಿದೆ. ದೇಶದ ಪತ್ರಿಕೋದ್ಯಮ ಪರಿಸ್ಥಿತಿ ಅವನತ್ತಿಯತ್ತ ಸಾಗಿದೆ. ಇದಕ್ಕೆ ನಮ್ಮನಾಳುವ ಸರಕಾರಗಳು ಜಾರಿಗೆ ತರುತ್ತಿರುವ ಕಾರ್ಪೋರೇಟ್ ಸಂಸ್ಕೃತಿ ಮತ್ತು ಬಂಡವಾಳಶಾಹಿ ಹಾಗೂ ವ್ಯಾಣಿಜ್ಯೀಕರಣದ ಪರಿಣಾಮಗಳು ಕಾರಣವಾಗಿವೆ. ಭಾರತದಲ್ಲಿ ನೈಜ ಪತ್ರಿಕೋದ್ಯಮ ಕುಸಿಯುತ್ತಿದೆ. ಇದಕ್ಕೆ ಮೇಲಿನ ಎಲ್ಲವೂ ಕಾರಣವಾಗಿದೆ ಎಂದು ಸರಕಾರದ ಧೋರಣೆಗಳನ್ನು ಖಂಡಿಸಿದರು.
ಕೋರೋನ ಸಂದರ್ಭದಲ್ಲಿ ಆದ ಲಾಕ್ಡೌನ್ನಿಂದ ಸುಮಾರು 90ರಷ್ಟು ಪತ್ರಕರ್ತರು ತಮ್ಮ ಕೆಲಸ ಕೊಳ್ಳದುಕೊಂಡರು, ಉದ್ಯೋಗ ಭದ್ರತೆಯೇ ಇಲ್ಲದಂತಾಯಿತು.ರೈತರು ಸುಮಾರು 1000ಕ್ಕೂ ಹೆಚ್ಚು ದಿನ ಪ್ರತಿಭಟನೆ ನಡೆಸಿ, 750ಕ್ಕೂ ಹೆಚ್ಚು ಜನ ಸಾವನ್ನಪ್ಪಿದರು.ಆದರೆ ಶೇ60ರಷ್ಟು ಭಾರತದ ಮಾಧ್ಯಮಗಳು ಮೋದಿ,ಅಂಬಾನಿ,ಅದಾನಿಯ ಜಪ ಮಾಡುತ್ತಿದ್ದವು. ಮಾನವೀಯ ವರದಿಗಳನ್ನು ನಿರ್ಲಕ್ಷಿಸಲಾಯಿತು. ಜಗತ್ತಿನ ಮಾಧ್ಯಮದ ದಿಕ್ಕಿಗೂ ಭಾರತದ ಮಾಧ್ಯಮ ದೃಷ್ಟಿಕೋನಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತಿದ್ದೇವೆ ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕ ಬಿ.ಸುರೇಶಗೌಡ, ಡಿಸಿ ಶುಭ ಕಲ್ಯಾಣ್. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್,ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಡಾ.ನಾಗಣ್ಣ, ಕಾಯರ್ ಬೋರ್ಡ್ನ ನಟರಾಜು, ಬಾಲಭವನದ ಅಧ್ಯಕ್ಷ ನಾಯ್ಡು ಇದ್ದರು.