ತುಮಕೂರಿನಲ್ಲಿ ಎರಡು ದಿನಗಳು ನಡೆದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಭಾನುವಾರ ವಿಧ್ಯುಕ್ತವಾಗಿ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಪತ್ರಕರ್ತರ ಹಿತ ಕಾಪಾಡುವ ನಿಟ್ಟಿನಲ್ಲಿ 6 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ತುಮಕೂರು ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ಮುಂದಿನ ವರ್ಷ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ರಾಯಚೂರು ಜಿಲ್ಲೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ರಾಜ್ಯದ ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ ಒದಗಿಸುವುದು. ಈಗಿರುವ ಪತ್ರಕರ್ತರ ಮಾಸಾಶನವನ್ನು ಹೆಚ್ಚಳ ಮಾಡುವ ಜತೆಗೆ ಮಾಸಾಶನ ಪಡೆಯಲು ವಿಧಿಸಿರುವ ನಿಬಂಧನೆಗಳನ್ನು ಸರಳೀಕರಣಗೊಳಿಸಬೇಕು ಎಂದು ನಿರ್ಣಯಿಸಲಾಯಿತು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನು ಸರಳೀಕರಣಗೊಳಿಸುವುದು ಹಾಗೂ ಹೋಬಳಿ ಮಟ್ಟದ ಪತ್ರಕರ್ತರಿಗೆ ಗ್ರಾಮೀಣ ಬಸ್‌ಪಾಸ್ ತಲುಪಿಸುವುದು.
ಪಕ್ಕದ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಪತ್ರಕರ್ತರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕರ್ನಾಟಕದ ಪತ್ರಕರ್ತರಿಗೂ ವಿಸ್ತರಿಸುವ ಕುರಿತು ಅಧ್ಯಯನ ಮಾಡಲು ಸಮಿತಿ ರಚನೆ ಮಾಡಿ, ಅಧ್ಯಯಕ್ಕೆ ನಿಯೋಗ ತೆರಳುವುದು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಪತ್ರಕರ್ತರು ನಿಧನರಾದ ಸಂದರ್ಭದಲ್ಲಿ ಬಾರ್ ಕೌನ್ಸಿಲ್ ಸದಸ್ಯರಿಗೆ ನೀಡುವಂತೆ 5 ಲಕ್ಷ ರೂ. ಪರಿಹಾರವನ್ನು ನೀಡುವುದು.
ರಾಜ್ಯದಲ್ಲಿ ಪ್ರಸ್ತುತ ಈಗಿರುವ ಜಾಹೀರಾತು ದರವನ್ನು ಶೇ.12 ರಷ್ಟು ಹೆಚ್ಚಳ ಮಾಡುವ ಕುರಿತು ನಿರ್ಣಯಗಳನ್ನು ಮಂಡಿಸಲಾಯಿತು.


