ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಗಿಸಿಕೊಂಡು ಮನೆಯ ಕಡೆ ಹೋಗುವ ವೇಳೆ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಮೃತಳನ್ನು ಮೈಥಿಲಿ ಎಂದು ಗುರುತಿಸಲಾಗಿದೆ.
ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ. ರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಮೂಲದ 19ವರ್ಷದ ಮೈಥಿಲಿ ಶನಿವಾರ ತರಗತಿ ಮುಗಿಸಿಕೊಂಡು ಪಟ್ಟಣದ ಕಡೆ ಬರುವಾಗ ಚಳ್ಳಕೆರೆ ಕ್ರಾಸ್ ಬಳಿ ಸುಸ್ತಾಗಿ ಕೆಳಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಕೆಲವರು ವಿದ್ಯಾರ್ಥಿನಿಯನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಮೃತ ಮೈಥಿಲಿ ತಂದೆ ವೆಂಕಟರಮಣಸ್ವಾಮಿ ಖಾಸಗಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಲಕ್ಷ್ಮೀದೇವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ.
ಸಾರ್ವಜನಿಕ ಆಸ್ಪತ್ರೆಯ ಬಳಿ ಮೈಥಿಲಿ ಮೃತದೇಹವನ್ನು ತಂದಾಗ ಕುಟುಂಬದ ಸದಸ್ಯರು ಮತ್ತು ವಿದ್ಯಾರ್ಥಿನಿಯ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು,


