ಸಂವಿಧಾನದ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿರುವಂತಹ ಸನ್ನಿವೇಶಗಳು, ಘಟನೆಗಳು ವರದಿಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಪತ್ರಕರ್ತರು ಐಪಿಲ್ ಭಾರತ ಬಿಟ್ಟು ಬಿಪಿಎಲ್ ಭಾರತದ ಕಡೆ ಗಮನ ಹರಿಸಬೇಕಾಗಿದೆ, ಪಿ.ಸಾಯಿನಾಥ್ ಅವರು ಪ್ರತೀ ಬಾರಿ ಪತ್ರಕರ್ತರಿಗೆ ಹೇಳುವ ಕಿವಿಮಾತಿದು ಎಂದು ಮಾಧ್ಯಮ ತಜ್ಞ ಜಿ.ಎನ್ ಮೋಹನ್ ತಿಳಿಸಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿರುವ 39ನೆಯ ರಾಜ್ಯ ಪತ್ರಕರ್ತರ ಸಮ್ಮೇಳನದ ವಿಚಾರಗೋಷ್ಟಿಯಲ್ಲಿ ‘ಸಂವಿಧಾನ ಮತ್ತು ಮಾಧ್ಯಮ’ ಕುರಿತು ವಿಷಯ ಮಂಡಿಸಿದ ಅವರು, ಇಂದು ಮಾಧ್ಯಮ ಕೇವಲ ಮಾಧ್ಯಮವಾಗಿ ಉಳಿದಿಲ್ಲ, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಂತೆಯೇ ಪತ್ರಕರ್ತರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನ ಹೇಗೆ ಮಾಧ್ಯಮವನ್ನು ರಕ್ಷಿಸುತ್ತದೆಯೋ ಹಾಗೆಯೇ ಮಾಧ್ಯಮವೂ ಸಂವಿಧಾನವನ್ನು ರಕ್ಷಿಸಬೇಕು ಎಂದರು.
ಇಡೀ ಜಗತ್ತಿನಲ್ಲಿ ಅಮೆರಿಕದಲ್ಲಿ ಮಾತ್ರ ಮಾಧ್ಯಮಕ್ಕೆ ಸಂವಿಧಾನದ ರಕ್ಟಣೆ ಇದೆ. ಬೇರೆ ರಾಷ್ಟçಗಳಲ್ಲಿ ಇಲ್ಲ. ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಮಾಧ್ಯಮಕ್ಕೆ ಸಾಮಾನ್ಯರಿಗೆ ಇರುವಂತೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. 19 (1) (ಎ)ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಮತ್ತು ಶಾಸಕ ಬಿಆರ್ ಪಾಟೀಲ್ ಮಾತನಾಡಿ, ಪತ್ರಿಕೆಗಳು ಚಳವಳಿಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದವು. 80ರ ದಶಕದಲ್ಲಿ ರೈತ ಚಳವಳಿ, ದಲಿತ ಚಳವಳಿ ಸೇರಿದಂತೆ ಇತರೆ ತಿಳುವಳಿಗಳು ಬಹಳ ದೊಡ್ಡದಾಗಿ ಬೆಳೆಯಲು ಅನುಕೂಲಕರವಾಗಿತ್ತು. ಆದರೆ ಇಂದು ಪತ್ರಿಕೆಗಳು ಉದ್ಯಮವಾಗಿ ಬದಲಾದ ನಂತರ ಚಳವಳಿಗಳಿಗೆ ಮಾಧ್ಯಮಗಳಲ್ಲಿ ಅಂತಹ ಮಹತ್ವ ಸಿಗುತ್ತಿಲ್ಲ ಎಂದರು.
ಟೆಲಕ್ಸ್ ರವಿ ಮಾತನಾಡಿದರು. ಎನ್. ರವಿಕುಮಾರ್, ಆಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಆರ್. ಪಾಟೀಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಎ.ಎಸ್. ಪೊನ್ನಣ್ಣ ಭಾಗವಹಿಸಿದ್ದರು. ಸಾ.ಚಿ.ರಾಜ್‌ಕುಮಾರ್ ಸ್ವಾಗತಿಸಿದರು.


