ಸಂಕ್ರಾಂತಿ ಹಬ್ಬವು ಸಂತೋಷ ಮತ್ತು ಪ್ರೀತಿಯನ್ನು ಹಂಚುವ ಹಬ್ಬವಾಗಿದ್ದು ತನ್ನ ಸುತ್ತಲಿನ ಪರಿಸರವನ್ನು ಸೌಹಾರ್ದಯುತವಾಗಿ ಕಾಪಾಡಿಕೊಳ್ಳುವುದು ಸಂಕ್ರಾಂತಿ ಹಬ್ಬದ ವಿಶೇಷವಾಗಿದೆ ಎಂದು ಜನಪರ ಚಿಂತಕ ಪ್ರೊ. ಕೆ. ದೊರೈರಾಜ್ ತಿಳಿಸಿದರು.
ಸೌಹಾರ್ದ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದ ಸಂಕ್ರಾಂತಿ ಹಬ್ಬವನ್ನು ಎಳ್ಳು ಬೆಲ್ಲ, ಕಡಲೆ ಕಾಯಿ. ಗೆಣಸು ಅವರೆಕಾಯಿ ನೀಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಂಕ್ರಾಂತಿ ಹಬ್ಬವು ದುಡಿಯುವ ವರ್ಗದ ಹಬ್ಬವಾಗಿದ್ದು ಇದು ಜಾತಿ-ಧರ್ಮವನ್ನು ಮೀರಿದ್ದಾಗಿದೆ. ಈ ಹಬ್ಬವು ಪ್ರೀತಿ, ಪ್ರೇಮ, ಸಂತೋಷವನ್ನು ನೀಡುವ ಹಬ್ಬವಾಗಿದೆ. ಈ ಪರಂಪರಯನ್ನು ನಿರಂತರವಾಗಿ ಮುಂದುವರಿಸಿಕೊಡು ಹೋಗಬೇಕು ಎಂದು ತಿಳಿಸಿದರು.
ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಸೌಹಾರ್ದಯುತ ಹಬ್ಬಗಳನ್ನು ಸಹ ತನ್ನ ವೈಯುಕ್ತಿಕ ಕಾರಣಗಳಿಗೆ ಧ್ವೇಷದ ರಾಜಕಾರಣ ಮಾಡಲು ಬಳಸುತ್ತಿರುವ ಕಾಲಘಟ್ಟದಲ್ಲಿ ನಾವು ಇದ್ದು ಇದನ್ನು ಸೋಲಿಸಬೇಕಾದರೆ ಅದು ಪ್ರೀತಿಯನ್ನು ಹಂಚುವ ಮೂಲಕ ಮಾತ್ರ ಸೋಲಿಸಲು ಸಾಧ್ಯವಾಗಿದ್ದು ಈ ರೀತಿಯ ಸೌಹಾರ್ದ ಆಚರಣೆಗಳು ಮತ್ತಷ್ಟು ಹೆಚ್ಚಲಿ ಎಂದರು.
ಸಮಾಜ ಸೇವಕ ತಾಜುದ್ದೀನ್ ಷರೀಪ್ ಮಾತನಾಡಿ, ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ನೀಡುವ ಕಡೆಲೆ ಕಾಯಿ, ಗೆಣಸು ತಿಂದು ಸಂಭ್ರಮಿಸುತ್ತಿದ್ದೆವು. ಇಂದು ನಮ್ಮ ನಡುವೆ ಸೌಹಾರ್ದಯುತವಾದ ಸಮಾಜ ನಿರ್ಮಾಣಕ್ಕಾಗಿ ಸೌಹಾರ್ದಯುತವಾದ ವಾತವರಣ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ಸರ್, ವಕೀಲ ಮೋಹಿದ್ದೀನ್, ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸತ್ಯನಾರಾಯಣ, ಕಲ್ಪನಾ, ಅನುಪಮ, ಚಂದ್ರಶೇಖರ, ಸುಜಿತ್ ನಾಯಕ್, ಯೋಗೀಶ್, ಅಶ್ವಥಯ್ಯ, ರವಿಶಂಕರ, ರಫಿಕಪಾಷ್, ಬಾಬು, ಅಲ್ತಾಪ್ ಇದ್ದರು.