ರೈತರು, ಕಮ್ಯುನಿಷ್ಟರು, ಹೋರಾಟಗಾರರು, ನಾಟಕಕಾರರು, ಪರಿಸರವಾದಿಗಳು ಹೀಗೆ ಬಹು ಆಯಾಮಗಳ ತಾಯಿ ಬೇರಿನಂತಿದ್ದ ತುಮಕೂರಿನ ‘ಜೈ ಹಿಂದ್’ ಹೊಟೇಲ್ ವಿದ್ಯುಕ್ತವಾಗಿ ಬಂದ್ ಆಗಿದೆ. ಸುಮಾರು 70 ವರ್ಷಗಳ ಹಿಂದೆ ಕುಂದಾಪುರದ ಬೀಜಾಡಿಯಿಂದ ಕೃಷ್ಣಯ್ಯ ಛಾತ್ರ ಅವರು ತುಮಕೂರಿಗೆ ಬಂದು ಸ್ಥಾಪಿಸಿದ್ದ ಹೊಟೇಲ್ ಅನ್ನು ಮುಚ್ಚಲಾಗಿದೆ. ಈ ಹೊಟೇಲ್ ಇದ್ದ ಜಾಗ ಮೊದಲು ಎಂ.ಜಿ. ರಸ್ತೆ ಎಂದು ಕರೆಸಿಕೊಳ್ಳುತ್ತಿತ್ತು, ಬಳಿಕ ಶಿರಾಣಿ ರಸ್ತೆಯಾಯಿತು. ಈಗ ವಿವೇಕಾನಂದ ರಸ್ತೆಯಾಗಿ ರೂಪುಗೊಂಡಿದೆ. 7 ದಶಕಗಳ ಕೆಳಗೆ ಛಾತ್ರ ಅವರು ಅಂದಿನ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿಗೆ ಬಂದಾಗ ಇಷ್ಟು ದೀರ್ಘ ಕಾಲ ಹೊಟೇಲ್ ಉದ್ಯಮ ಮಾಡುತ್ತೇವೆಂದು ಅಂದುಕೊಂಡಿರಲಿಲ್ಲ ಅನ್ನಿಸುತ್ತೆ. ಆಗೆಲ್ಲಾ 50 ಪೈಸೆ ಕೊಟ್ಟರೆ ಸ್ನಾನಕ್ಕೆ ಬಿಸಿ ನೀರು ಕೊಡುತ್ತಿದ್ದರು, 25 ಪೈಸೆ ಕೊಟ್ಟರೆ ಮಸಾಲೆ ದೋಸೆ ಸಿಗುತ್ತಿತ್ತು. ತುಮಕೂರಿನ ಪ್ರಶಾಂತ್ ಥಿಯೇಟರ್ ಮುಂಭಾಗ, ಬಸ್ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿ ಈ ಹೊಟೇಲ್ ಇದೆ.

ಆರ್ಟಿಪಿಶಿಯಲ್ ಇಂಟಲಿಜೆನ್ಸ್, ರೋಬೋರ್ಟ್, ಐಷಾರಾಮಿ, ದುಬಾರಿ ದುನಿಯಾದ ಕಾಲಘಟ್ಟದಲ್ಲಿ ಇರುವ ಹೊತ್ತಲ್ಲಿ ಈ ಹೊಟೇಲ್ ನಲ್ಲಿ ಐಷಾರಾಮಿ ಕುರ್ಚಿ ಇರುತ್ತಿರಲಿಲ್ಲ, ಹಳೆ ಕಟ್ಟಡದ ಪಳೆಯುಳಿಕೆಯಂತಿದ್ದ ಈ ಹೊಟೇಲ್ ನಲ್ಲಿ ಜೀವನಪ್ರೀತಿ ಇತ್ತು. ಹೊಟೇಲ್ ಒಳಹೊಕ್ಕಿ ಬಲಕ್ಕೆ ತಿರುಗಿದರೆ ಇಂದಿರಾಗಾಂಧಿ ಹಾಗೂ ಜವಹರ್ ಲಾಲ್ ನೆಹರೂ ಅವರ ಮುದ್ದಾದ ಫೋಟೋ ಗೋಡೆಯಲ್ಲಿರುತ್ತಿತ್ತು. ಬಹುಶಃ ಈ ಫೋಟೋ ಜೈ ಹಿಂದ್ ಹೊಟೇಲ್ ನ ಇತಿಹಾಸವನ್ನು ಸಾರುತ್ತಿತ್ತು.
ವಯಸ್ಸಿನ ಕಾರಣದಿಂದಾಗಿ ಹೊಟೇಲ್ ಜವಾಬ್ದಾರಿಯನ್ನು ಅವರ ಪುತ್ರ ಬಾಬಣ್ಣ ವಹಿಸಿಕೊಂಡಿದ್ದರು. ಯಾವತ್ತೂ ಮುಖ ಗಂಟಿಕ್ಕಿಕ್ಕೊಳದೆ, ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರು ಏನೊಂದು ಪ್ರಶ್ನೆ ಮಾಡದ ಬಾಬಣ್ಣ ನಿಗೆ ಹೋರಾಟಗಾರರ ಬಗ್ಗೆ ಸಾರ್ಥಕ ಭಾವ.
ತುಮಕೂರಿನಲ್ಲಿ ಕೆಲವಾರು ಅಡ್ಡಗಳಿವೆ, ವೀ ಚಿಕ್ಕವೀರಯ್ಯ, ಸಣ್ಣಗುಡ್ಡಯ್ಯ ಹಾಗೂ ಕೆ.ಆರ್. ನಾಯಕ್ ಅವರ ಅಡ್ಡ ಒಂದೆಡೆಯಾದರೆ ಮತ್ತೊಂದು ಅಡ್ಡ ಈ ಜೈ ಹಿಂದ್ ಹೊಟೇಲ್. ಪರಿಸರ ಚಿಂತಕರಾದ ಸಿ. ಯತಿರಾಜು, ಜನಸಂಗ್ರಾಮ ಪರಿಷತ್ ಅಧ್ಯಕ್ಷರಾದ ಪಂಡಿತ ಜವಹರ್ ಅವರಿಗೆ ಈ ಹೊಟೇಲ್ ಸುಮಾರು 3 ರಿಂದ 4 ದಶಕಗಳ ಕಾಲ ಕರುಳ ಬಳ್ಳಿಯ ಸಂಬಂಧ. ಇವರಿಬ್ಬರ ಜನ ಚಳವಳಿಯ ಮಾತುಕತೆ ಬಾಯಿಂದ ಬಾಯಿಗೆ ಹಬ್ಬಿ ಸಿಜ್ಞಾ ಎಂಬ ಸಂಘಟನೆಯ ಹುಡುಗರು ಇಲ್ಲಿ ಸೇರಲು ಶುರುವಾದರು. ಜವಹರ್ ಜೊತೆ ಪರಿಸರ ಬರಹಗಾರರೂ ಉತ್ತಮ ಫೋಟೋಗ್ರಫರ್ ಆಗಿರುವ ಆಯುರ್ವೇದ ಮೆಡಿಕಲ್ ನ ಸುಬ್ರಹ್ಮಣ್ಯ ಅಡಿಗ, ದೊಡ್ಡ ಹೊಸೂರಿನ ರೈತ ಮುಖಂಡ ರವೀಶ್, ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ದೇಸಿ ಪ್ರಸನ್ನ, ಎಸ್.ಆರ್. ಹಿರೇಮಠ್ ಅವರೆಲ್ಲರೂ ಮಾತುಕತೆಗೆ ಈ ಹೊಟೇಲ್ ತಾಣವಾಗಿತ್ತು. ಗಣಿ ವಿರೋಧಿ ಹೋರಾಟದ ಬಗ್ಗೆ ಗಂಟೆಗಟ್ಟಲೆ ಇಲ್ಲಿ ಮಾತುಕತೆಯಾಗಿದೆ, ದೊಡ್ಡ ಹೊಸೂರು ಗ್ರಾಮದಲ್ಲಿ ಆರಂಭವಾದ ಗಾಂಧಿ ಸಹಜ ಬೇಸಾಯ ಆಶ್ರಮ ರೂಪುಗೊಂಡಿದ್ದು ಕೂಡ ಇದೇ ಹೊಟೇಲ್ ನಲ್ಲಿ. ಸಿದ್ದರಬೆಟ್ಟದಿಂದ ಜಲದ ಜಾಡು ಹಿಡಿದು ನಡೆದ ಹೋರಾಟ ಜನ್ಮ ತಾಳಿದ್ದು ಇಲ್ಲಿಯೇ. ‘ಮದಲಿಂಗನ ಕಣಿವೆ’ಗೆ ‘ಸೀಡ್ ಬಾಲ್’ ಹಾಕಿ ಪರಿಸರ ಬೆಳೆಸುವ ಚಳವಳಿಗೆ ಬೀಜ ಬಿದ್ದದ್ದು ಇಲ್ಲಿಯೇ.

ಸೈನ್ಸ್ ಸೆಂಟರ್ ರ ಎಷ್ಟೋ ಕಾರ್ಯಕ್ರಮಗಳ ಚರ್ಚೆಯ ತಾಣ ಬಾಬಣ್ಣನ ಜೈ ಹಿಂದ್ ಹೊಟೇಲ್ ಆಗಿತ್ತು. ಕೃಷಿ ಉತ್ಪನ್ನಗಳಿಗೆ ಜಿಎಸ್ಟಿ ಬೇಡವೆಂದು ಶಿರಾ ತಾಲೂಕು ಕಳುವರಹಳ್ಳಿಯಿಂದ ಅರಸೀಕೆರೆ ಗಾಂಧಿ ಆಶ್ರಮದವರೆಗಿನ ಸುಮಾರು 160 ಕಿ.ಮೀ. ಪಾದಯಾತ್ರೆ ರೂಪುರೇಷೆ ಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು ಇದೇ ಹೊಟೇಲ್ ನಲ್ಲಿ. ಪ್ರತಿ ದಿನ ಮಧ್ಯಾಹ್ನ 12 ರಿಂದ 1 ಗಂಟೆ, ಸಂಜೆಯ 6 ರಿಂದ 7 ಗಂಟೆಯವರೆಗೆ ಅಕ್ಷರಶಃ ಈ ಜಾಗ ಹರಟೆಯ ಕೇಂದ್ರವಾಗಿರದೆ ಅರಿವಿನ ಕೇಂದ್ರವಾಗಿತ್ತು. ಬಾಬಣ್ಣನ ಈ ಹೊಟೇಲ್ ಅನ್ನು ಕಾಲದ ಅಗತ್ಯತೆಗಾಗಿ ಮುಚ್ಚಲು ಹೊರಟಾಗ ಈ ಹೊಟೇಲ್ ನೊಂದಿಗೆ ಕರುಳ ಬಳ್ಳಿ ಸಂಬಂಧ ಇಟ್ಟುಕೊಂಡ ನಮ್ಮಂಥವರಿಗೆಲ್ಲಾ ಎಂತದ್ದೋ ಮೂಕ ವೇದನೆ. ಯಾರೋ ಬಂಧುವನ್ನು ಕಳೆದುಕೊಂಡಂತೆ ಭಾವನೆ ನಮ್ಮೆಲ್ಲರಲ್ಲೂ ಮನೆ ಮಾಡಿತ್ತು.
ನಮ್ಮ ಎಷ್ಟೋ ಹೋರಾಟಗಳು, ಚರ್ಚೆಗಳು, ವಿಚಾರ ವಿನಿಮಯಗಳು ಬಾಬಣ್ಣನ ಜೈ ಹಿಂದ್ ಹೊಟೇಲ್ ನಲ್ಲಿ ಮುಗಿಯುತ್ತಿದ್ದು ಕೇವಲ, ಕಾಫಿ, ಕಷಾಯ ಹಾಗೂ ಜೀರಾದಲ್ಲಿ ಮಾತ್ರ. ಈ ಹೊಟೇಲ್ ನೊಂದಿಗೆ ಸಂಪರ್ಕ ಇಟ್ಟುಕೊಂಡವರು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ, ಬರೆಹಗಾರರಾಗಿದ್ದಾರೆ, ರಂಗಭೂಮಿ ಕಲಾವಿದರಾಗಿದ್ದಾರೆ, ಪತ್ರಕರ್ತರಾಗಿದ್ದಾರೆ, ಹೋರಾಟಗಾರರಾಗಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ಬಾಬಣ್ಣನಲ್ಲಿದ್ದ ತಾಯಿಯ ಅಂತಃಕರಣ ಹಾಗೂ ಬುದ್ದನ ಕಾರುಣ್ಯದಿಂದ ಮಾತ್ರ.
ಈ ಹೊಟೇಲ್ ಬಳಗದ ಕಾವ್ಯಶ್ರೀ ಬೆಟ್ಟದಬಯಲು ಹೊಟೇಲ್ ನೊಂದಿಗೆ ಒಡನಾಟವನ್ನು ಮೆಲುಕು ಹಾಕಲು, ಬಾವುಕ ಕ್ಷಣಗಳಿಗೆ ಸಾಕ್ಷಿಯಾಗಲು ಪುಟ್ಟದೊಂದು ಕಾರ್ಯಕ್ರಮ ಆಯೋಜಿಸಿದ್ದರು. ಅಕ್ಷರಶಃ ಎಲ್ಲರಲ್ಲೂ ಕಣ್ಣಲ್ಲೂ ನೀರು ತುಂಬಿತ್ತು. ಕಾರ್ಯಕ್ರಮದ ಬಳಿಕ ಬಾಬಣ್ಣನಿಗೊಂದು ಪುಟ್ಟ ಗೌರವ ಸಲ್ಲಿಸಿದೆವು. ದಶಕಗಳ ಕಾಲ ಚಳವಳಿಯ ಸಖನಂತಿದ್ದ ಬಾಬಣ್ಣನ ಜೈ ಹಿಂದ್ ಹೊಟೇಲ್ ಈಗ ಇತಿಹಾಸ.
ಬರೆಹ:ಉಗಮ ಶ್ರೀನಿವಾಸ್, ಹಿರಿಯ ಪತ್ರಕರ್ತರು