ವೀರಶೈವ ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿಗಳು ಆಗಿರುವ ವಿ.ಸೋಮಣ್ಣ ಅವರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ 852ನೇ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸದೆ ಅವಮಾನ ಮಾಡಿದ್ದು, ಇದು ಖಂಡನೀಯ ಎಂದು ಸಮುದಾಯದ ಮುಖಂಡ ಬಿ.ಬಿ.ಮಹದೇವಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದಲ್ಲಿರುವ ವೀರಶೈವ, ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿ ವಿ.ಸೋಮಣ್ಣ, ಜನಾನುರಾಗಿಗಳು, ಜಾತ್ಯತೀತ ವ್ಯಕ್ತಿಗಳಾಗಿರುವ ಅವರನ್ನು ನೊಳಂಬ ವೀರಶೈವ, ಲಿಂಗಾಯಿತ ಸಂಘದವರು ನಡೆಸುತ್ತಿರುವ ಸಿದ್ದರಾಮೇಶ್ವರ ಜಯಂತಿಗೆ ಅಹ್ವಾನಿಸದೆ, ಇಡೀ ಕರ್ನಾಟಕ ರಾಜ್ಯದಲ್ಲಿರುವ ವಿ.ಸೋಮಣ್ಣ ಅಭಿಮಾನಿಗಳಿಗೂ ಅಪಮಾನ ಮಾಡಲಾಗಿದೆ. ಇವರ ವರ್ತನೆಯ ವಿರುದ್ದ ಮುಂದಿನ ದಿನಗಳಲ್ಲಿ ನೊಳಂಬ ಯುವ ವೇದಿಕೆ ತಕ್ಕ ಉತ್ತರ ನೀಡಲಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ, ರಾಜ್ಯದಲ್ಲಿ ಸೋಮಣ್ಣ ಅವರು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುತ್ತಿರುವುದನ್ನು ಸಹಿಸದೆ ಚಾಮರಾಜನಗರ ಮತ್ತು ವರುಣ ಎರಡು ಕಡೆ ನಿಲ್ಲುವಂತಹ ಅನಿವಾರ್ಯತೆ ಸೃಷ್ಟಿಸಿ, ಬೇಕಂತಲೇ ಸೋಲಿಸಿದರು. ಆದರೆ ತುಮಕೂರಿನ ಜನ ಆ ಕೆಲಸ ಮಾಡಲಿಲ್ಲ.ಯಡಿಯೂರಪ್ಪ ನಂತರ ವಿ.ಸೋಮಣ್ಣ ಸಮುದಾಯದ ನಾಯಕರಾಗಿ ಬೆಳೆಯುತ್ತಿರುವುದನ್ನು ಸಹಿಸದೆ ಈ ಕೆಲಸ ಮಾಡಲಾಗಿದೆ ಎಂದು ದೂರಿದರು.
ಸಿದ್ದರಾಮ ಸೇನೆಯ ಜಿಲ್ಲಾಧ್ಯಕ್ಷ ಹೇಮಂತಕುಮಾರ್ ಮಾತನಾಡಿ, ಸಿದ್ದರಾಮೇಶ್ವರ ಜಯಂತಿ ಕೇಂದ್ರ ಸಮಿತಿ ವಿ.ಸೋಮಣ್ಣನವರಿಗೆ ಮಾತ್ರ ಅಪಮಾನ ಮಾಡಿಲ್ಲ. ಗೋಡೆಕೆರೆ ಸ್ವಾಮೀಜಿಗೂ ಅಪಮಾನ ಮಾಡಿದ್ದಾರೆ. ಈ ಹಿಂದೆ ಮಠ ಮಾನ್ಯಗಳಲ್ಲಿ ನಡೆಯುತ್ತಿದ್ದ ಸಿದ್ದರಾಮೇಶ್ವರರ ಜಯಂತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಿ, ಧಾರ್ಮಿಕ ಆಚಾರ, ವಿಚಾರಗಳಿಗಿಂತ ಮೋಜು, ಮಸ್ತಿಗೆ ಸಿಮೀತಗೊಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಸಿದ್ದರಾಮ ಸೇನೆ,ವಿ.ಸೋಮಣ್ಣ ಮತ್ತು ಗೋಡೆಕೆರೆ ಶ್ರೀಗಳಿಗೆ ಅವಮಾನ ಮಾಡಿದವರಿಗೆ ಸರಿಯಾದ ಪಾಠ ಕಲಿಸಲಿದೆ ಎಂದರು.
ತಿಪಟೂರು ನಗರಸಭೆ ಮಾಜಿ ಅಧ್ಯಕ್ಷ ಲಿಂಗರಾಜು, ಕನ್ನಡ ಪ್ರಕಾಶ್, ಯತೀಶ್ ಮತ್ತಿತರರು ಹಾಜರಿದ್ದರು,