ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ ತೀವ್ರ ಆತಂಕಗೊಂಡಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ರಾಜಕೀಯ ಮುಖಂಡರನ್ನು ಭೇಟಿಯಾಗಿ ತಮ್ಮ ನೆರವಿಗೆ ಬರಬೇಕೆಂದು ಕೋರುತ್ತಿದ್ದಾರೆ.
ಮೈಸೂರು, ಶಿವಮೊಗ್ಗ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾಲಿಬಾನ್ ದಾಳಿ ನಂತರ ಪೋಷಕರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬ ಅಳಲು ತೋಡಿಕೊಂಡಿದ್ದಾರೆ. ಆತಂಕ, ಭಯ ಆ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
ಆಗಸ್ಟ್ 23ರಂದು ಆಫ್ಘಾನಿಸ್ತಾನದ ವಿದ್ಯಾರ್ಥಿಗಳ ನಿಯೋಗವೊಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ತಮ್ಮ ನೆರವಿಗೆ ಬರುವಂತೆ ಶಿವಕುಮಾರ್ ಅವರನ್ನು ಕೋರಿತು.
ಆಫ್ಘಾನಿಸ್ತಾನದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ಪರಿಸ್ಥಿತಿಯು ವಿಶ್ವವನ್ನೇ ತಲ್ಲಣಗೊಳಿಸಿದೆ. ಕರ್ನಾಟಕದಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಈ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ನಿಯೋಗದಲ್ಲಿ ಜಹಿದುಲ್ಲಾ ಸಾದಿಕ್, ಒಬೆದುಲ್ಲಾ ಸಾದಿಕಿಲಿ, ದಿಯಾನ್ ಫರ್ಜಾನ್, ಹಾರುನ್ ಮೊದಲಾದವರು ಇದ್ದರು.