Thursday, September 19, 2024
Google search engine
Homeಮುಖಪುಟಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ- ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚಲಿದೆಯೇ?

ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ- ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚಲಿದೆಯೇ?

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕೊನೆಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜೊತೆಗೆ ತಮ್ಮ ಪುತ್ರನನ್ನೂ ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದಾರೆ. ಈ ಮೂಲಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ಎರಡು ವರ್ಷಗಳಿಂದಲೂ ಶಾಸಕ ಜಿ.ಟಿ.ದೇವೇಗೌಡರು ಸ್ವಪಕ್ಷೀಯರ ವಿರುದ್ದವೇ ಟೀಕಾಪ್ರಹಾರ ನಡೆಸುತ್ತಿದ್ದರು. ಬಿಜೆಪಿ ನಾಯಕರ ಅಭಿವೃದ್ಧಿ ಕಾರ್ಯಗಳನ್ನು ಪ್ರಶಂಸಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ಹೀಗಾಗಿ ಜಿ.ಟಿ. ದೇವೇಗೌಡ ಬಿಜೆಪಿಗೆ ಸೇರಬಹುದೆಂಬ ಸುದ್ದಿ ವ್ಯಾಪಕವಾಗಿತ್ತು. ಆದರೆ ಜಿ.ಟಿ.ದೇವೇಗೌಡ ತಮ್ಮ ಪುತ್ರನೊಂದಿಗೆ ಕಾಂಗ್ರೆಸ್ ಸೇರಿರುವುದು ಮೈಸೂರು ಭಾಗದಲ್ಲಿ ಆ ಪಕ್ಷಕ್ಕೆ ಬಲಬಂದತೆ ಆಗಿದೆ.

ಜಾತ್ಯತೀತ ಜನತಾ ದಳದಲ್ಲಿ ವರಿಷ್ಠರ ನಡೆಗಳು ಶಾಸಕರಲ್ಲಿ ಇರಿಸುಮುರುಸು ಉಂಟು ಮಾಡಿದ್ದವು. ಒಮ್ಮೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಮತ್ತೊಮ್ಮೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಹಲವು ಶಾಸಕರ ಬೇಸರಕ್ಕೆ ಕಾರಣ. ಮುಖ್ಯಮಂತ್ರಿ ಯಡಿಯೂರಪ್ಪ ಮೈತ್ರಿ ಸರ್ಕಾರವನ್ನು ಪತನಗೊಳಿಸಿದರೂ ಮತ್ತೆ ಅವರೊಂದಿಗೆ ಕೈಜೋಡಿಸಿದ್ದು ಹಲವು ಶಾಸಕರು ಬಹಿರಂಗವಾಗಿ ಅಸಮಾಧನ ಹೊರಹಾಕಲು ಕಾರಣವಾಗಿತ್ತು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ ಸಭಾಪತಿಯಾಗಿ ಆಯ್ಕೆ ಮಾಡುವಾಗಲೂ ಜೆಡಿಎಸ್ ವರಿಷ್ಟರು, ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ಒಳಗೊಳಗೆ ಒಪ್ಪಂದ ಮಾಡಿಕೊಂಡರು. ಹಲವು ಬಾರಿ ದ್ವಂದ್ವ ನಿರ್ಧಾರ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಶಾಸಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಹೀಗಾಗಿ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ದಳಪತಿಗಳ ದಾಳ ಈಗ ಉಲ್ಟಾ ಆಗತೊಡಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಎದುರಾಗಲಿವೆ. ಜೆಡಿಎಸ್ ತೊರೆಯುವ ಶಾಸಕರ ಸಂಖ್ಯೆ ಹೆಚ್ಚಾದರೆ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ. ಇದು ದಳಪತಿಗಳಿಗೂ ಗೊತ್ತಿರುವ ಸಂಗತಿ. ಇಡೀ ಅಧಿಕಾರ ಕಟುಂಬದ ಕೈಯಲ್ಲಿರುವುದರಿಂದ ಬೇರೆಯವರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಜೆಡಿಎಸ್ ವಲಯದಿಂದಲೇ ಕೇಳಿಬರುತ್ತಿವೆ.

2022ರ ವಿಧಾನಸಭೆಯ ಚುನಾವಣೆ ಹತ್ತಿರ ಬರುತ್ತಿವಂತೆಯೇ ಜೆಡಿಎಸ್ ತೊರೆದು ಹೋಗುವವರು ಹೆಚ್ಚಾಗಬಹುದು. ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೀಗೆ ಹಲವು ಮಾಜಿ ಮತ್ತು ಹಾಲಿ ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಹಾದಿಯಲ್ಲಿದ್ದಾರೆ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರ ವಿರುದ್ಧವೇ ಮಾತನಾಡುತ್ತಿರುವುದು ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಶಾಸಕರು ಮತ್ತು ಮುಖಂಡರನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಇದನ್ನು ಪುಷ್ಟೀಕರಿಸುವಂತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular