ದೇಶವನ್ನು ಸೂಪರ್ ಪವರ್ ಆಗಿಸುವಲ್ಲಿ ವಿದ್ಯಾರ್ಥಿಗಳು ಮತ್ತು ನವ ಯುವಕರ ಕೊಡುಗೆ ಅತ್ಯಗತ್ಯ. ಪ್ರತಿಯೊಬ್ಬ ಯುವಕನು ಉದ್ಯೋಗವನ್ನು ಹುಡುಕುವುದರ ಜೊತೆಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವಂತಾಗಬೇಕು. ಮೊದಲು ಸಿಕ್ಕಿರುವ ಉದ್ಯೋಗಾವಕಾಶಗಳನ್ನು ಉಪಯೋಗಿಸಿಕೊಂಡು ನಂತರ ವೇತನದ ಬಗ್ಗೆ ಯೋಚಿಸಿ, ಉದ್ಯೋಗಾವಕಾಶಗಳು ಚಿಕ್ಕದಿರಲಿ ದೊಡ್ಡದಿರಲಿ ಬಳಸಿಕೊಳ್ಳುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಡಿಸಿ ಶುಭಕಲ್ಯಾಣ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಉದ್ಯೋಗ ಮೇಳಕ್ಕೆ ಸುಮಾರು 5000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿರುವುದು ಸಂತಸದ ಸುದ್ದಿ. ಉದ್ಯೋಗ ಮೇಳದಲ್ಲಿ ಸುಮಾರು 100 ಕ್ಕೂ ಕಂಪನಿಗಳು ಭಾಗಿಯಾಗಿದ್ದು ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಸುಸಜ್ಜಿತ ವೇದಿಕೆಯಾಗಿದೆ. ಜನವರಿ 26ಕ್ಕೆ ಕನಿಷ್ಠ ಒಂದು ಸಾವಿರ ಜನಕ್ಕೆ ಉದ್ಯೋಗ ಕೊಡಿಸುವ ಗುರಿ ನಮ್ಮದಾಗಿದೆ ಎಂದರು.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಮಾತನಾಡಿ, ಜಿಲ್ಲಾಡಳಿತವು ನಿಮ್ಮ ಮನೆ ಬಾಗಿಲಿಗೆ ಕೆಲಸದ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಕಂಪನಿಗಳು ತಮಗೆ ಅವಶ್ಯವಿರುವ ಉದ್ಯೋಗಾಕಾಂಕ್ಷಿಗಳ ಕಡೆ ಗಮನ ಹರಿಸುತ್ತದೆ, ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಉತ್ತಮ ಸಂವಹನ ಕೌಶಲ್ಯ ಜೊತೆಗೆ ಉದ್ಯೋಗಕ್ಕೆ ಬೇಕಾದ ತಾಂತ್ರಿಕ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ತುಮಕೂರು ವಿವಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಪರಶುರಾಮ್ ಮಾತನಾಡಿ, ಈ ಬಾರಿ 11ಸಾವಿರ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ, ಆದರೆ ಕೇವಲ ಒಂದೂವರೆ ಸಾವಿರ ವಿದ್ಯಾರ್ಥಿಗಳು ಮಾತ್ರ ಉನ್ನತ ವ್ಯಾಸಂಗಕ್ಕೆ ಸೇರಿದ್ದಾರೆ, ಉಳಿದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ಅಧಿಕಾರಿ ಕಿಶೋರ್ಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಟಿ.ಕೆ.ಕೆಂಪಯ್ಯ, ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಹಿರಿಯ ಪ್ರಾಧ್ಯಾಪಕ ಪ್ರೊ.ರಮೇಶ್ ಇನ್ನಿತರರು ಇದ್ದರು.