ಎರಡೂವರೆ ವರ್ಷದ ಅವಧಿಗೆ ಯಾಕೆ ಮುಖ್ಯಮಂತ್ರಿ ಆಗ್ತೀರಾ, ಮುಂದಿನ 5 ವರ್ಷದ ಅವಧಿಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿರಲಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಡಿಸಿಎಂಗೆ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜಣ್ಣ, ದೇವರು ಶಾಪ ಕೊಡುತ್ತದೆ ಎಂಬುದನ್ನೆಲ್ಲಾ ನಾವೇ ಸೃಷ್ಟಿ ಮಾಡಿಕೊಂಡಿರುವುದು. ಯಾವುದೇ ಶಾಪವೂ ಇಲ್ಲ, ದೇವರು ದಿಂಡಿರು ಇಲ್ಲ ಎಂದು ಡಿಕೆ ಶಿವಕುಮಾರ್ ದೇವಲಾಯ ಭೇಟಿಯನ್ನು ಲೇವಡಿ ಮಾಡಿದ್ದಾರೆ.
ನನಗೆ ದೇವರು, ಧರ್ಮದ ಬಗ್ಗೆ ನಂಬಿಕೆ ಇಲ್ಲ. ನಾನು ದೇವಾಲಯಗಳಿಗೂ ಭೇಟಿ ನೀಡುವುದಿಲ್ಲ. ನಾವು ಮಾಡುವ ಕೃತ್ಯದಲ್ಲೇ ದೇವರಿದ್ದಾನೆ. ಬಡವನಿಗೆ ನೆರವು ನೀಡಿದರೆ, ಅವನು ನೆರವು ನೀಡಿದವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾನೆ. ಅದೇ ದೇವರು, ಅದೇ ರೀತಿ ಯಾರಾದವರೊಬ್ಬರಿಗೆ ಕೆಟ್ಟದನ್ನು ಮಾಡಿದರೆ, ಕೆಟ್ಟದ್ದು ಮಾಡಿದಾತನನ್ನು ಬೈದುಕೊಳ್ಳುತ್ತಾನೆ. ಹಾಗಾಗಿ ನಾವು ನಡೆದುಕೊಳ್ಳುವ ರೀತಿಯಲ್ಲೇ ದೇವರಿದ್ದಾನೆ ಎಂದು ತಿಳಿಯಬೇಕು ಎಂದರು.
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ
ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.


