Thursday, January 29, 2026
Google search engine
Homeಮುಖಪುಟಶಿಕ್ಷಣಕ್ಕೆ ಒತ್ತು ನೀಡಲು ಲೇಖಕಿ ಉಮಾದೇವಿ ಗ್ಯಾರಳ್ಳ ಸಲಹೆ

ಶಿಕ್ಷಣಕ್ಕೆ ಒತ್ತು ನೀಡಲು ಲೇಖಕಿ ಉಮಾದೇವಿ ಗ್ಯಾರಳ್ಳ ಸಲಹೆ

ಇಂದು ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯಗಳಲ್ಲಿ ಒಂದಾಗಿರುವ ಶಿಕ್ಷಣ ಹಿಂದೆ, ಮೇಲ್ವರ್ಗದ ಗಂಡು ಮಕ್ಕಳಿಗೆ ಮಾತ್ರ ಸಿಗ್ತಾ ಇತ್ತು. ಅಂತಹ ದಿನಗಳಲ್ಲಿ ಹೆಣ್ಣುಮಕ್ಕಳ, ಶೂದ್ರರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಫುಲೆ ದಂಪತಿ ಎಂದು ಲೇಖಕಿ ಉಮಾದೇವಿ ಗ್ಯಾರಳ್ಳ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆಯು, ತುಮಕೂರು ವಿ.ವಿ.ಕಲಾ ಕಾಲೇಜು ಸ್ನಾತಕ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂ ಅವರಂತಹ ಹೆಣ್ಣುಮಕ್ಕಳು ಗಗನಯಾತ್ರಿಗಳಾಗಲು ಸಾಧ್ಯವಾಗಿದ್ದು ಶಿಕ್ಷಣದಿಂದ. ರೇಣುಕಾ ಪೂಜಾರಿ ಅವರು ಮೊದಲ ಟ್ರಾನ್ಸ್ ಜೆಂಡರ್ ಅಧ್ಯಾಪಕಿ ಆಗಲು ಸಾಧ್ಯವಾಗಿದ್ದು ಶಿಕ್ಷಣದಿಂದ. ಶಿಕ್ಷಣದ ಮಹತ್ವ ಅರಿತಿದ್ದ ಜ್ಯೋತಿ ಬಾ ಫುಲೆ ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಅಕ್ಷರ ಕಲಿಸಿದರು ಎಂದು ಹೇಳಿದರು.
ಬಾಲ್ಯ ವಿವಾಹ ನಿಷೇಧ, ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು. ಸರಳ ವಿವಾಹಗಳನ್ನು ಮಾಡಿಸಿದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯರಾದ ವಿಧವೆಯರು ಪ್ರಾಣಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ರಸೂತಿ ಗೃಹಗಳನ್ನೂ, ವಿಧವೆಯರ ಮಕ್ಕಳಿಗಾಗಿಯೇ ಶಿಶು ಪಾಲನಾ ಕೇಂದ್ರಗಳನ್ನು ತೆರೆದರು. ವಿಧವೆಯೊಬ್ಬರ ಮಗನನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡಿ ಡಾಕ್ಟರ್ ಮಾಡಿಸಿದರು ಎಂದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರು ಎಲ್ಲಾ ಜಾತಿ ವರ್ಗದ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಮಂಡಲಗಳನ್ನು ರಚಿಸಿದರು, ಕಾರ್ಮಿಕರು, ಕೃಷಿಕರಿಗಾಗಿ ರಾತ್ರಿ ಶಾಲೆಗಳನ್ನು ತೆರೆದರು .ಕ್ಷೌರಿಕರನ್ನು ಒಗ್ಗೂಡಿಸಿ ವಿಧವೆಯರ ತಲೆ ಬೋಳಿಸುವುದನ್ನು ತಡೆದರು. ಜ್ಯೋತಿ ಬಾ ನಿಧನದ ನಂತರ ಸಾವಿತ್ರಿ ಬಾಯಿ ಫುಲೆ ಸತ್ಯ ಶೋಧಕ ಸಮಾಜವನ್ನು ಮುನ್ನಡೆಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೇಖಕಿ ಬಾ.ಹ.ರಮಾಕುಮಾರಿ, ಡಾ. ವನಜಾಕ್ಷಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular