ನಮ್ಮದು ಬೆಸೆಯುವ ಸಂಸ್ಕೃತಿ ಎಲ್ಲವನ್ನು ಬೆಸೆದುಕೊಂಡು ನಾಡನ್ನು ರೂಪಿಸಿಕೊಂಡಿದ್ದೇವೆ. ಹಾಗಾಗಿ ನಾವು ಕೋಮುವಾದಿಗಳಾಗದೆ ಜಾತಿವಾದಿಗಳಾಗದೆ ಕನ್ನಡವಾದಿಗಳಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.
ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ 2024-25ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕವಾಗಿ ನೂರಾರು ಸಂಸ್ಕೃತಿಗಳ ನಮ್ಮ ನಾಡಿನಲ್ಲಿಯೇ ಇವೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಡುವೆ ಏಕ ಸಂಸ್ಕೃತಿಯ ಏರಿಕೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು. 2011ರ ಜನಗಣತಿ ಪ್ರಕಾರ ದೇಶದಲ್ಲಿ 19,560 ತಾಯ್ನುಡಿಗಳು ದಾಖಲಾಗಿವೆ. ಈ ಎಲ್ಲವೂ ಸಂಸ್ಕೃತಿಗಳೇ. ನಮ್ಮದು ವೈವಿಧ್ಯಮಯ ಭಾರತ. ಏಕ ಸಂಸ್ಕೃತಿಯದ್ದಲ್ಲ ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಸೃತ ಕವಿ ಡಾ.ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಸಾಂಸ್ಕೃತಿಕ ಬದುಕು ಬಡವಾದರೆ ನಾವೆಷ್ಟೇ ಶ್ರೀಮಂತರಾದರೂ ಪ್ರಯೋಜನವಿಲ್ಲ. ಹಾಗಾಗಿ ಸಾಂಸ್ಕೃತಿಕ ಕ್ರಾಂತಿ ನಡೆಯಬೇಕಿದೆ ಎಂದು ತಿಳಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾದರೆ ಶತಮಾನಗಳ ತ್ಯಾಗ, ಬಲಿದಾನವಿದೆ. ಪ್ರಜಾಪ್ರಭುತ್ವದ ಧರ್ಮ ಉಳಿಯಲು ಸಾಂಸ್ಕೃತಿಕ ನಾಯಕರು ಬೇಕು ಎಂದು ತಿಳಿಸಿದರು.
ಸಹಕಾರ ಸಚಿವ ಕೆ,ಎನ್.ರಾಜಣ್ಣ ಮಾತನಾಡಿ, ಕಲಿಕೆಗೆ ಬಡವ, ಶ್ರೀಮಂತ ಎಂಬ ಭೇದ-ಭಾವ ಇರುವುದಿಲ್ಲ. ದೇವರು ಎಲ್ಲರಿಗೂ ಒಂದೇ ರೀತಿಯಾದ ಬುದ್ಧಿಶಕ್ತಿಯನ್ನು ಕೊಟ್ಟಿರುತ್ತಾನೆ. ಆ ಬುದ್ಧಿಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕು ಎಂದರು.
ವೇದಿಕೆಯಲ್ಲಿ ಶಾಸಕ ಜ್ಯೋತಿಗಣೇಶ್, ಡಿಸಿ ಶುಭಕಲ್ಯಾಣ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣದಾಸ್, ಬಸವರಾಜು, ಮಹಾಲಿಂಗೇಶ್, ಮಲ್ಲಯ್ಯ, ಡಾ. ಸದಾಶಿವಯ್ಯ, ರವಿಕುಮಾರ್, ಗೋವಿಂದರಾಜು ಮತ್ತಿತರರು ಹಾಜರಿದ್ದರು.