ಡಿನ್ನರ್ ಪಾರ್ಟಿ ಎಲ್ಲಿ ರದ್ದಾಗಿದೆ. ಡಿನ್ನರ್ ಪಾರ್ಟಿಯನ್ನು ಮುಂದೂಡಿದ್ದೇವೆ ಅಷ್ಟೇ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಮೊನ್ನೆಯಷ್ಟೇ ನಡೆದಿರುವ ಡಿನ್ನರ್ ಪಾರ್ಟಿಯಿಂದ ಗೊಂದಲ ಉಂಟಾಗಿದೆ. ಹೀಗಾಗಿ ಡಿನ್ನರ್ ಪಾರ್ಟಿ ಮುಂದೂಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಡಿನ್ನರ್ ಪಾರ್ಟಿಯನ್ನು ಮುಂದೂಡಿದ್ದೇವೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ ಎಂದರು.
ಮೊನ್ನೆಯ ಡಿನ್ನರ್ ಕುರಿತು ಗೊಂದಲವಿದೆ. ಹಾಗಾಗಿ ಇನ್ನೊಂದು ಗೊಂದಲ ಆಗುವುದು ಬೇಡ. ಅದಕ್ಕೆ ಡಿನ್ನರ್ ಪಾರ್ಟಿಯನ್ನು ಹೈಕಮಾಂಡ್ ಮುಂದೂಡಬೇಕು ಎಂದು ಹೇಳಿದೆ. ಅದಕ್ಕಾಗಿ ಮುಂದೂಡಿದ್ದೇವೆ ಎಂದು ಹೇಳಿದರು.
ಡಿನ್ನರ್ ಪಾರ್ಟಿ ಬಗ್ಗೆ ಡಿ.ಕೆ.ಶಿವಕುಮಾರ್ ಬೇಜಾರ್ ಆಗುವುದಕ್ಕೆ ಅವರ ಆಸ್ತಿಯನ್ನು ಬರೆಸಿಕೊಂಡಿದ್ದೀರಾ ಎಂದು ಹೇಳಿದ ಕೆಎನ್ಆರ್ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಸಭೆ ಕರೆದರೆ, ನೀವು ಮಾಡ್ಬೇಡಿ ಅಂದರೆ ಇವರೆಲ್ಲಾ ಪರಿಶಿಷ್ಟರ ವಿರೋಧಿಗಳಾ? ಇಂತಹದೆಲ್ಲಾ ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಟಾಂಗ್ ನೀಡಿದರು.
ಹಾಸ್ಟೆಲ್ ಸೀಟು ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಸೀಟು ತೆಗೆದುಕೊಂಡವರಿಗೆ ಸ್ಕಾಲರ್ ಶಿಪ್ ಇಲ್ಲ. ಇದು ಎಸ್ಸಿ-ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವು ಸಮಸ್ಯೆಗಳಿವೆ. ಈ ಕುರಿತು ಚರ್ಚೆ ನಡೆಸಲು ಸಭೆ ಕರೆದರೆ, ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಮಾಡ್ಬೇಡಿ ಎಂದರೆ ಏನ್ ಹೇಳುವುದು. ಇದು ಪರಿಶಿಷ್ಟ ಸಮಾಜಕ್ಕೆ ಮಾಡುವ ಅನ್ಯಾಯವಿದೆ ಎಂದು ಬೇಸರ ಹೊರ ಹಾಕಿದರು.
ಮುಂದೆ ಸಭೆ ನಡೆಸುವ ದಿನಾಂಕವನ್ನು ತಿಳಿಸುತ್ತೇವೆ. ಫೆ.14ರಂದು ಎಂ.ಎಂ.ಹಿಲ್ಸ್ ನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಚಾಮರಾಜನಗರ ಜಿಲ್ಲೆಗೆ ಹೋದರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹೋಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಷ್ಟರೊಳಗೆ ಸಭೆ ಕರೆಯುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ರಾಜಕೀಯ ತೀರ್ಮಾನಗಳು ಆಗಿಲ್ಲ ಎಂದು ಹೇಳಿದರು.


