ತಮ್ಮ ವಾಹನದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಜೈ ಭೀಮ್ ಹಾಡುಗಳನ್ನು ಹಾಕಿಕೊಂಡು ಹೋಗುತ್ತಿದ್ದರು ಎಂಬ ಕಾರಣಕ್ಕೆ ಇಬ್ಬರು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ದ ಆಟ್ರಾಸಿಟಿ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ ಮಾದಿಗ ಪರ ಸಂಘಟನೆಗಳ ಒಕ್ಕೂಟದಿಂದ ಎಸ್‌ಪಿ ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾದಿಗ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೋಡಿಯಾಲ ಮಹದೇವ್ ಮಾತನಾಡಿ, ತುಮಕೂರು ತಾಲ್ಲೂಕು, ಹೆಬ್ಬೂರು ಹೋಬಳಿ ಸಿರಿವರ ಗ್ರಾಮದ ದೀಪು ಮತ್ತು ಆತನ ಸ್ನೇಹಿತ ನರಸಿಂಹಮೂರ್ತಿ ಎಂಬುವವರು ತಮ್ಮ ಹಾಲಿನ ವಾಹನದಲ್ಲಿ ಅಂಬೇಡ್ಕರ್ ಅವರ ಮಹಾನಾಯಕ ಧಾರವಾಹಿಯ ಶೀರ್ಷಿಕೆ ಗೀತೆಯನ್ನು ಹಾಕಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗುಬ್ಬಿ ತಾಲೂಕು ಕಸಬಾ ಹೋಬಳಿ ಗಿಡಗಮುದ್ದನಹಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಚಂದ್ರಶೇಖರ್ ಮತ್ತು ಆತನ ಸ್ಮೇಹಿತ ನರಸಿಂಹರಾಜು ಎಂಬುವರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು, ಮಹಾನಾಯಕ ಧಾರವಾಹಿಯ ಗೀತೆ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ನೀವೇನು ಹೊಲೆ ಮಾದಿಗರ ಎಂದು ಪ್ರಶ್ನಿಸಿ, ಗಲಾಟೆ ತೆಗೆದು, ದೀಪು ಎಂಬ ಹುಡುಗನ ಮರ್ಮಾಂಗಕ್ಕೆ ಒದ್ದು ಗಾಯಗೊಳಿಸಿರುವುದಲ್ಲದೆ, ಆತನ ಸ್ನೇಹಿತ ನರಸಿಂಹಮೂರ್ತಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಇಬ್ಬರು ಗಾಯಾಳುಗಳು ಗುಬ್ಬಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಘಟನೆ ನಡೆದು, ದೂರು ದಾಖಲಾಗಿ ಎರಡು ದಿನ ಕಳೆದರು ಆರೋಪಿಗಳನ್ನು ಬಂಧಿಸದೆ ಈ ದೇಶದ ಕಾನೂನಿಗೆ ಅಪಮಾನ ಮಾಡಿದಾರೆ. ಜಿಲ್ಲಾ ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಆಗ್ರಹಿಸಿದರು.
ಈ ವೇಳೆ ಮಾದಿಗ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಟಿ.ಸಿ.ರಾಮಯ್ಯ, ಬಂಡೆಕುಮಾರ್, ಪಿ.ಎನ್. ರಾಮಯ್ಯ, ಯೋಗೀಶ್ ಸೋರೆಕುಂಟೆ, ವಿರೂಪಸಂದ್ರ ರಾಮಾಂಜಿ, ನಿಟ್ಟೂರು ನಾಗಭೂಷಣ್, ಕುಪ್ಪೂರು ಶ್ರೀಧರನಾಯಕ್, ಸಾಗರ್, ಅಗಳಕುಂಟೆ ರಂಗಸ್ವಾಮಿ, ಗೂಳರಿವೆ ನಾಗರಾಜು, ರಾಮಮೂರ್ತಿ, ಹೆಚ್.ಬಿ.ರಾಜೇಶ್,ಅಮರ್, ಸಂತು ಮತ್ತಿತರರು ಹಾಜರಿದ್ದರು.


