ನಾ ಡಿಸೋಜಾ ಅವರು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ನನ್ನ ಕಣ್ಣ ಮುಂದೆ ಸುಳಿದದ್ದು ನೀರು. ನೀರು. ನೀರು. ಅದಕ್ಕೆ ಕಾರಣವಿತ್ತು. ನಾನು ಮೊತ್ತಮೊದಲು ಅವರ ಕೈ ಕುಲುಕಿದ್ದು ಶರಾವತಿಯ ಹಿನ್ನೀರಿನ ಅಲೆಗಳ ಮೇಲೆ ತೆಪ್ಪದಲ್ಲಿ ಕುಳಿತಾಗ. ಹೊನ್ನೆಮರಡುವಿನ ತಟದಿಂದ ಹೊರಟ ನಾವು ಶರಾವತಿ ನದಿಯಲ್ಲಿ ಒಂದಷ್ಟು ದೂರ ಸಾಗಿದ್ದೆವು ಅಷ್ಟೇ.. ಅಲ್ಲಿಯವರೆಗೆ ನನ್ನೊಂದಿಗೆ ಮೆಲುದನಿಯಲ್ಲಿ, ಆದರೆ ಸಾಕಷ್ಟು ಮಾತನಾಡುತ್ತಾ ಇದ್ದ ನಾ ಡಿಸೋಜಾ ಅವರು ಯಾಕೋ ಮೌನಕ್ಕೆ ಜಾರಿದರು ಅನಿಸಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಆ ಮೌನ ನಿಟ್ಟುಸಿರಾಗಿ ಬದಲಾಗಿತ್ತು. ಆದರೆ ನನಗೆ ತೀರಾ ಆತಂಕವಾದದ್ದು ಕೆಲವೇ ಕ್ಷಣಗಳಲ್ಲಿ ಅ ಮೌನ ಕಣ್ಣೀರಾಗಿ ಬದಲಾದಾಗ. ನಿಜ, ಹಸನ್ಮುಖರಾಗಿ ತೆಪ್ಪ ಏರಿದ್ದ, ಸುಂದರ ಮುಗುಳ್ನಗು ಚೆಲ್ಲುತ್ತಾ ಬಾಯ್ತುಂಬಾ ಮಾತನಾಡುತ್ತಿದ್ದ ನಾ ಡಿಸೋಜಾ ಅವರ ಕಣ್ಣಿಂದ ನೀರು ಇಳಿಯುತ್ತಿತ್ತು. ಗಾಬರಿಯಾದ ನಾನು ಸಾರ್.. ಎಂದು ಅವರ ಕೈ ಅದುಮಿದೆ. “ನಾವು ಸಾಗುತ್ತಿರುವ ಈ ನೀರಿನ ಕೆಳಗೆ ಮುಳುಗಿ ಹೋದ ಹಲವು ಗ್ರಾಮಗಳಿವೆ, ನೆಲೆ ಕಳೆದುಕೊಂಡು ತಬ್ಬಲಿಯಾದ ನೂರಾರು ಕುಟುಂಬಗಳಿವೆ. ನೀರಿನಲ್ಲಿ ಮುಳುಗಿ ಸತ್ತ ಜನ ಜಾನುವಾರುಗಳು ಇವೆ, ಇವರೆಲ್ಲರ ಆಕ್ರಂದನ ನನಗೆ ಕೇಳಿಸುತ್ತಿದೆ” ಎಂದರು.
ಹೌದು, ಆ ನೀರು, ಆ ಸಂಕಟ, ಆ ಆಕ್ರಂದನವೇ ನಾ ಡಿಸೋಜಾ ಅವರ 40 ಕ್ಕೂ ಹೆಚ್ಚು ಕಾದಂಬರಿಗಳು, ನೂರಕ್ಕೂ ಹೆಚ್ಚು ಕಥೆ, ನಾಟಕಗಳಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತದೆ. ಬಹುತೇಕ ಸಾಹಿತ್ಯ ನೀರನ್ನು ಸಂಭ್ರಮಿಸಿದ್ದರೆ ನಾ ಡಿಸೋಜಾ ಅವರ ಕಥೆ ಕಾದಂಬರಿಯಲ್ಲಿ ನೀರು ಆತಂಕದ ಅಲೆಗಳನ್ನು ಎಬ್ಬಿಸುತ್ತದೆ, ಕಣ್ಣೀರಿಗೆ ಕಾರಣವಾಗುತ್ತದೆ, ನೀರಿನ ಏರಿಳಿತವನ್ನು ಕಟ್ಟಿಕೊಟ್ಟು ಓದುಗರು ನಿಟ್ಟುಸಿರಿಡುವಂತೆ ಮಾಡುತ್ತದೆ.
ಎಸ್ ಎಸ್ ಎಲ್ ಸಿ ಓದಿ ಮುಂದೆ ಏನು ಮಾಡಬೇಕೆಂದು ಗೊತ್ತಾಗದೆ ಟೈಪಿಸ್ಟ್ ಆಗಿದ್ದ ಯುವಕ 1959 ರಲ್ಲಿಶರಾವತಿ ಯೋಜನೆ ಆರಂಭವಾದಾಗ ಅರ್ಜಿ ಗುಜರಾಯಿಸಿದ. ಕೆಲಸ ಸಿಕ್ಕು ಸಾಗರಕ್ಕೆ ಬಂದಿಳಿದ ನಾರ್ಬರ್ಟ್ ಡಿಸೋಜಾ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಸಾಗರವನ್ನೇ ಅಪ್ಪಿಕೊಂಡರು. ಶರಾವತಿಯ ಯೋಜನೆಯನ್ನು ಸಂಭ್ರಮಿಸಿದ್ದ ಅವರು ಕ್ರಮೇಣ ಜನ ತತ್ತರಗೊಂಡಂತೆ ತಾವೂ ಒದ್ದಾಡಿ ಹೋದರು, ತಮ್ಮ ಕಚೇರಿಯ ಬಾಗಿಲು ತಟ್ಟುತ್ತಿದ್ದ ಕಥೆಗಳನ್ನೇ ತಮ್ಮ ಕತೆಯೊಳಗೆ ಕೈಹಿಡಿದು ನಡೆಸಿಕೊಂಡು ಬಂದರು.
ನಾ ಡಿಸೋಜಾ ಅವರು ಇನ್ನೂ ನಾಲ್ಕನೇ ತರಗತಿಯಲ್ಲಿರುವಾಗಲೇ ಕಾರಂತರು, ಮಾಸ್ತಿಯವರ ಅಷ್ಟೂ ಕಥೆ, ಕಾದಂಬರಿಗಳನ್ನು ಓದಿ ಮುಗಿಸಿದ್ದರು. ಅವರ ತಂದೆ ನಿಧಾನವಾಗಿ ಅಮ್ಮ ದುಃಖದ ನಡುವೆ ಇದ್ದಾಗ ಡಿಸೋಜಾರ ಅಕ್ಕ, ಅಣ್ಣಂದಿರು ಶಾಲೆಯಿಂದ ಈ ಎಲ್ಲಾ ಪುಸ್ತಕಗಳನ್ನೂ ತಂದುಕೊಟ್ಟು ಅಕ್ಷರ ಗೊತ್ತಿಲ್ಲದ ಅಮ್ಮನಿಗೆ ಇದನ್ನೆಲ್ಲಾ ಓದಿ ಹೇಳುವಂತೆ ಹೇಳಿದ್ದರು. ಡಿಸೋಜಾ ಹೇಳುತ್ತಾರೆ- “ಈ ಕಥೆ ಕಾದಂಬರಿಗಳನ್ನು ಓದುತ್ತಾ ಅಮ್ಮ ಒಂದು ಕಡೆ ಕಣ್ಣೀರು ಒರೆಸಿಕೊಳ್ಳುತ್ತಿದ್ದರೆ ಅವರಿಗೆ ಗೊತ್ತಾಗದಂತೆ ನಾನು ಇನ್ನೊಂದು ಕಡೆ ಕಣ್ಣೀರು ಒರೆಸಿಕೊಳ್ಳುತ್ತಿದ್ದೆ ಎಂದು. ನನ್ನೊಳಗೆ ಒಬ್ಬ ಕಥೆಗಾರ ಹುಟ್ಟಲು ಇದೇ ಕಾರಣವಾಯಿತು ಎಂದಿದ್ದ ನಾ ಡಿಸೋಜಾ ಅವರಿಗೆ ಭಾರಿ ಅಣೆಕಟ್ಟೆಗಳ ಬಗ್ಗೆ ಇನ್ನಿಲ್ಲದಂತಹ ಅಸಮಾಧಾನವಿತ್ತು. ನೆಹರೂ ಅವರು ಅಣೆಕಟ್ಟೆಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದರು. ಆದರೆ ಇವತ್ತು ಈ ಆಧುನಿಕ ದೇವಾಲಯಗಳು ಭಾರತದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ವಿದೇಶದಲ್ಲಿ ಕಟ್ಟಿದ್ದ ಆಣೆಕಟ್ಟೆಗಳನ್ನು ಇಂದು ಒಡೆದು ಹಾಕುತ್ತಿದ್ದಾರೆ. ಆದರೆ ನಾವು ಇಲ್ಲಿ ಅಣೆಕಟ್ಟೆಗಳನ್ನು ಕಟ್ಟುವುದೇ ಅಭಿವೃದ್ಧಿ ಎಂದುಕೊಂಡು ಇನ್ನಷ್ಟು ಮತ್ತಷ್ಟು ನೋವಿಗೆ ಕಾರಣವಾಗುತ್ತಿದ್ದಾರೆ ಎಂದಿದ್ದರು. .
ನಮ್ಮ ದೇಶ ವಿಭಜನೆಯಾದಾಗ ನಿರಾಶ್ರಿತರಾದವರಿಗಿಂತ ಮೂರು ಪಟ್ಟು ಹೆಚ್ಚು ಜನ ಅಣೆಕಟ್ಟೆಗಳ ನಿರ್ಮಾಣದಿಂದ ನಿರಾಶ್ರಿತರಾಗಿದ್ದಾರೆ. ಇದು ನನ್ನನ್ನ ಕಾಡುತ್ತಾ ಇರುವ ಒಂದು ದೊಡ್ಡ ದುರಂತ. ಒಂದು ಪ್ರದೇಶವನ್ನ ಬಿಟ್ಟು ಹೋಗುವುದು ಮನುಷ್ಯನಿಗೆ ಅಷ್ಟು ಸುಲಭ ಅಲ್ಲ. ಅವನು ಹುಟ್ಟಿ ಬೆಳೆದಂತಹ ಪ್ರದೇಶವನ್ನ ಬಿಟ್ಟು ಹೋಗುವುದು, ಜಮೀನು ಮಾಡಿದಂತಹ ಪ್ರದೇಶವನ್ನು ಬಿಟ್ಟು ಹೋಗುವುದು ಬಹಳ ಕಷ್ಟದ ಕೆಲಸ. ಶರಾವತಿಯಲ್ಲಿ ಮುಳುಗಡೆಯಾದಾಗ ಜನ ತಮ್ಮ ಹಸುಕರುಗಳನ್ನ ದೂರದ ಶಿವಮೊಗ್ಗದಲ್ಲಿ ಹೊಸದಾಗಿ ಕೊಟ್ಟ ಜಮೀನಿನಲ್ಲಿ ಬಿಟ್ಟು ಬಂದರು. ಎರಡು ಮೂರು ದಿವಸಗಳ ನಂತರ ನೋಡಿದರೆ ಅಷ್ಟೂ ಹಸು ಕರು ಇಲ್ಲಿಗೇ ವಾಪಸು ಬಂದಿತು. ಎಂತಹ ದುರಂತ. 85 ಕಿಮಿ ದೂರದಿಂದ ಆ ದಾರಿಯನ್ನ ನೆನಪಿಟ್ಟುಕೊಂಡು ಆ ಹಸು ಕರುಗಳು ವಾಪಸು ಬಂದಿದೆ ಅಂದ್ರೆ ಮನುಷ್ಯನಿಗೆ ಎಂತಹ ಮೋಹ ಇರಲಿಕ್ಕಿಲ್ಲ ? ಈ ನೋವನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ ಅನ್ನುವುದು ನನ್ನ ಸಂಕಟ.
ಈ ಸಂಕಟಗಳ ಸರಮಾಲೆಯೆ ಅವರ ಸಾಹಿತ್ಯದ ಹರಿವನ್ನೂ ತಿದ್ದಿತು. ಅವರು ಮುಳುಗಡೆಯ ಬಗ್ಗೆ ಬರೆದ ಕಾದಂಬರಿಗಳಲ್ಲಿ ’ದ್ವೀಪ’ ಮೊದಲನೆಯದು. ’ದ್ವೀಪ’ ಬರೆಯಲು ಏನು ಕಾರಣ ಅಂದ್ರೆ, ಶರಾವತಿ ಅಣೆಕಟ್ಟೆ ಮಗಿದು ನೀರು ನಿಧಾನವಾಗಿ ನಿಲ್ಲಲು ಆರಂಭವಾಗಿತ್ತು. ಸುಮಾರು 5-10 ಅಡಿ ಎತ್ತರಕ್ಕೆ ಡ್ಯಾಂ ನಿಂತಿತ್ತು. ಅದಕ್ಕೆ ತಾಗಿಕೊಂಡಂತೆ ನೀರು ನಿಂತಿತ್ತು. ಹಾಗೆ ನಿಂತ ನೀರಿನಲ್ಲಿ ಒಂದು ಕುಟುಂಬ ಮುಳುಗಿದ್ದನ್ನು ನಾನು ನೋಡಿದೆ. ಆ ಕುಟುಂಬದ ಪರಿಹಾರದ ರೆಕಾರ್ಡುಗಳ ತೀರ್ಮಾನವಾಗಿರಲಿಲ್ಲ. ಬರಬೇಕಿದ್ದ ಪರಿಹಾರ ಸಿಕ್ಕಿರಲಿಲ್ಲ. ಆದರೆ ನೀರು ಬಂದು ಮನೆಬಾಗಿಲಿಗೆ ನಿಂತಿತ್ತು. ಅ ದಂಪತಿಗಳು ಬಹಳ ಕಷ್ಟದಲ್ಲಿದ್ದರು. ಬಹಳ ನೋವಿನಲ್ಲಿದ್ದರು. ಎಲ್ಲಿಗೆ ಹೋಗಬೇಕು ಅಂತ ಗೊತ್ತಿರಲಿಲ್ಲ. ನಾನು ಅದನ್ನ ನೋಡಿ ’ದ್ವೀಪ’ ಕಾದಂಬರಿ ಬರೆದೆ ಎಂದಿದ್ದರು.
ನಾವಿದ್ದ ತೆಪ್ಪ ನೀರಿನ ಮೇಲೆ ಇನ್ನೂ ತೇಲುತ್ತಲೇ ಇತ್ತು. ನಾ ಡಿಸೋಜಾ ಅವರು ನೀರಿನ ಒಳಗಡೆ ಇದ್ದ ನೆನೆಪುಗಳನ್ನು ಹೆಕ್ಕುತ್ತಲೇ ಇದ್ದರು. ನಾ ಡಿಸೋಜಾ ಅವರು ಕಥೆ ಇದ್ದ ಕಡೆಗೆ ಹೋದರೋ ಅಥವಾ ಕಥೆಗಳೇ ಇವರನ್ನು ಹುಡುಕಿಕೊಂಡು ಬಂದವೋ ಎನ್ನುವಂತೆ ಅವರ ಕಥೆ, ಕಾದಂಬರಿ, ಮಕ್ಕಳ ಕಥೆಗಳು ಎಲ್ಲವೂ ಅವರು ಕಂಡ ನೋವುಗಳನ್ನೇ ಬಿಂಬಿಸಿದೆ.
ಅವರ ಅನುಭವವನ್ನು ಬಿಚ್ಚಿಡುತ್ತಾ ಅವರು ಹೇಳಿದರು ಕೊನೆಗೆ ಗೆಲ್ಲುವುದು ಮಾನವೀಯತೆಯೇ. ಮಾನವೀಯವಾಗಿ ಬದುಕಿದ ತಮ್ಮ ಸಾಹಿತ್ಯದಲ್ಲಿ ‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ’ ಎನ್ನುವುದನ್ನು ಚೆನ್ನಾಗಿ ಕಂಡುಕೊಂಡಿದ್ದ, ಅದರ ರಿಪೇರಿ ಕೆಲಸಕ್ಕಿಳಿದ ಹಸನ್ಮುಖಿ ನಾ ಡಿಸೋಜಾ ಇಲ್ಲವಾಗಿದ್ದಾರೆ. ಹೋಗಿಬನ್ನಿ ಸರ್..
ಲೇಖಕರು: ಜಿ.ಎನ್.ಮೋಹನ್, ಹಿರಿಯ ಪತ್ರಕರ್ತರು.


