Thursday, January 29, 2026
Google search engine
Homeಮುಖಪುಟಮಡಿವಾಳರನ್ನು ಎಸ್.ಸಿ ವರ್ಗಕ್ಕೆ ಸೇರಿಸಲು ಸರ್ಕಾರಕ್ಕೆ ಆಗ್ರಹ

ಮಡಿವಾಳರನ್ನು ಎಸ್.ಸಿ ವರ್ಗಕ್ಕೆ ಸೇರಿಸಲು ಸರ್ಕಾರಕ್ಕೆ ಆಗ್ರಹ

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಮಡಿವಾಳ ಸಮಾಜದವರಿಗೆ ಸರ್ಕಾರದ ಸವಲತ್ತುಗಳು ನ್ಯಾಯಯುತವಾಗಿ ದೊರೆಯುತ್ತಿಲ್ಲ. ಪ್ರಸ್ತುತ 2ಎ ವರ್ಗದಲ್ಲಿ ಮಡಿವಾಳ ಸಮಾಜವಿದೆ. 2ಎ ನಲ್ಲಿ ಬಲಾಢ್ಯ ಜಾತಿಗಳಿದ್ದು, ಅವರೊಂದಿಗೆ ಪೈಪೋಟಿ ನಡೆಸಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ, ಈವರೆಗಿನ ಯಾವ ಸರ್ಕಾರಗಳೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ತಿಳಿಸಿದರು.

ಮಡಿವಾಳರನ್ನು ಎಸ್ಸಿ ವರ್ಗಕ್ಕೆ ಸೇರಿಸಲು ಆ ವರ್ಗದಲ್ಲಿ ಹಾಲಿ ಇರುವ ಸಮುದಾಯಗಳು ವಿರೋಧ ಮಾಡುತ್ತಿವೆ. ಸರ್ಕಾರಗಳೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಇನ್ನು ಮುಂದೆ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಈ ತಿಂಗಳ 27 ಕ್ಕೆ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ನಿರ್ಧಾರ ಮಾಡುವುದಾಗಿ ತಿಳಿಸಿದರು.

ಮಡಿವಾಳ ಮಾಚಿದೇವರ ಜಯಂತುತ್ಸವದ ಅಂಗವಾಗಿ ಮಡಿವಾಳ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಬರುವ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮಡಿವಾಳ ಸಮಾಜದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜದ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಸಾಮೂಹಿಕ ವಿವಾಹಕ್ಕಾಗಿ ವಧು, ವರರ ಹೆಸರು ನೋಂದಣಿ ಆರಂಭವಾಗಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಜೋಡಿಗಳು ತಂದೆ, ತಾಯಿಯ ಅನುಮತಿ ಪಡೆದಿರಬೇಕು, ವಧುವಿಗೆ ಕನಿಷ್ಟ 18 ವರ್ಷ, ವರನಿಗೆ ಕನಿಷ್ಟ 21 ವರ್ಷ ಆಗಿರಬೇಕು ಎಂಬುದೂ ಸೇರಿದಂತೆ ವಿವಿಧ ಷರತ್ತುಗಳಿಗೆ ಬದ್ಧವಾಗಿರಬೇಕು. ಮಡಿವಾಳ ಸಮಾಜದ ಕುಟುಂಬಗಳ ಸಾಂಪ್ರದಾಯಕ ಶಾಸ್ತ್ರಗಳನ್ನು ವಿವಾಹದಲ್ಲಿ ಅನುಸರಿಸಲಾಗುವುದು. ವಿವಾಹಕ್ಕೆ ನೋಂದಣಿ ಮಾಡಿಸಿದ ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರು, ಕಾಲು ಚೈನು, ರೇಷ್ಮೆ ಸೀರೆ, ವರನಿಗೆ ಕೈಗಡಿಯಾರ, ಬಟ್ಟೆ ಉಚಿತವಾಗಿ ನೀಡಲಾಗುವುದು. ವಧು-ವರನ ಜೊತೆ ಬರುವ ಎಲ್ಲಾ ಬಂಧುಬಳಗದವರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಏಪ್ರಿಲ್ 14ರಂದು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಆದಿಚುಂಚನಗಿರಿ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಡಿವಾಳ ಸಮಾಜದ ಮಠಾಧೀಶ ಮೂಡಬಿದರೆ ಮಠದ ಮುಕ್ತಾನಂದ ಸ್ವಾಮೀಜಿ, ಚಿತ್ರದುರ್ಗ ಮಠದ ಬಸವ ಮಾಚಿದೇವ ಸ್ವಾಮೀಜಿ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾಗವಹಿಸುವರು ಎಂದು ಹೇಳಿದರು.

ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷ್ಮಣ್, ರಾಜ್ಯ ಅಧ್ಯಕ್ಷ ನಂಜಪ್ಪ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಕೆಂಪನರಸಯ್ಯ, ಮುಖಂಡ ಶಾಂತಕುಮಾರ್, ಸೇರಿದಂತೆ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular