ಒಬ್ಬ ವಿದ್ವಾಂಸನ ಸಾವು ಕೇವಲ ಒಬ್ಬ ಮನುಷ್ಯನ ಸಾವಾಗಿರುವುದಿಲ್ಲ, ಅದೊಂದು ಅರಿವಿನ ಭಂಡಾರದ ಸಾವಾಗಿರುತ್ತದೆ. ಅಂತಹದ್ದೊಂದು ಸಾವು ಪ್ರೊ ಮುಝಾಪರ್ ಅಸ್ಸಾದಿಯವರದ್ದು. ಅವರು ಇನ್ನು ಎಷ್ಟೋ ಬರೆಯುವುದಿತ್ತು, ಮಾತನಾಡುವುದಿತ್ತು, ನಮಗೆ ಮಾರ್ಗದರ್ಶನ ನೀಡುವುದಿತ್ತು. ನೋವಾಗುತ್ತಿರುವುದು ಈ ನಷ್ಟದ ದು:ಖಕ್ಕಾಗಿ.
ಅಸ್ಸಾದಿ ಅವರು ಪಾಠ ಮಾಡುವ ತರಗತಿಗಳು ಮತ್ತು ತಮ್ಮ ವಿದ್ಯಾರ್ಥಿಗಳಿಗಷ್ಟೇ ಸೀಮಿತರಾಗಿದ್ದ ಪ್ರಾಧ್ಯಾಪಕರಾಗಿರಲಿಲ್ಲ. ಸಾಮಾಜಿಕ ಪರಿವರ್ತನೆ ಮತ್ತು ಅನ್ಯಾಯದ ವಿರುದ್ದದ ಹೋರಾಟಕ್ಕೆ ತಮ್ಮ ಅಧ್ಯಯನ ಪೂರ್ಣ ಒಳನೋಟಗಳನ್ನು ನೀಡುತ್ತಿದ್ದ ಜೊತೆಗೆ ಬೀದಿಗೆಬಂದು ಜೊತೆಯಲ್ಲಿ ನಿಲ್ಲುತ್ತಿದ್ದ ಒಬ್ಬ ಜನಪರ ಚಿಂತಕ. ಜೋರು ಮಾತಿನ ವಾದ-ವಿವಾದದ ಗೋಜಿಗೆ ಹೋಗದ ಅಸ್ಸಾದಿ ಅವರು ಸದಾ ಹಸನ್ಮಖಿ, ಮಾತು ಮತ್ತು ಬರವಣಿಗಳಿಗೆ ಬಂದರೆ ವೈಚಾರಿಕವಾಗಿ ಸಾಸಿವೆಯಷ್ಟೂ ರಾಜಿಯಾಗದ ಗಟ್ಟಿಕಾಳು.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿ ಇಷ್ಟೊಂದು ಗೌರವ-ಮಾನ್ಯತೆ ಪಡೆದಿರುವ ಇನ್ನೊಬ್ಬ ವಿದ್ವಾಂಸ ಸದ್ಯಕ್ಕೆ ನಮ್ಮಲ್ಲಿ ಇನ್ನೊಬ್ಬರಿಲ್ಲ. ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡುತ್ತಿದ್ದ ಆಸಕ್ತಿಯಲ್ಲಿಯೇ ಬೀದಿಯಲ್ಲಿ ನಿಂತು ಭಾಷಣ ಮಾಡುತ್ತಿದ್ದರು. ಅವರೆಂದೂ ವಿಶ‍್ವವಿದ್ಯಾಲಯಗಳ ದಂತಗೋಪುರದ ಪ್ರಾಧ್ಯಾಪಕರಾಗಿರಲಿಲ್ಲ.
ನನ್ನೂರಿನ ಪಕ್ಕದ ಶಿರ್ವ ಎಂಬ ಗ್ರಾಮದಿಂದ ಬಂದಿರುವ ಮುಝಾಪರ್ ಸಿಕ್ಕಿದಾಗೆಲ್ಲ ತುಳುವಿನಲ್ಲಿ ‘’ ಧನಿಕುಲೆ ಅಡ್ಡ ಬೂರಿಯೆ’’’ (ಧಣಿಗಳೇ ಅಡ್ಡಬಿದ್ದೆ) ಎಂದು ತಮಾಷೆಯಾಗಿ ಮಾತು ಶುರುಮಾಡುತ್ತಿದ್ದರು. ಒಂದು ವಾರದ ಹಿಂದೆಯಷ್ಟೇ ತುಮಕೂರು ವಿಶ‍್ವವಿದ್ಯಾಲಯದಲ್ಲಿ ಜೊತೆಗಿದ್ದೆವು, ದೈಹಿಕವಾಗಿ ಸ್ವಲ್ಪ ಬಳಲಿದಂತೆ ಕಂಡರೂ ಯಥಾಪ್ರಕಾರ ನಿಂತುಕೊಂಡೇ ಒಂದು ಗಂಟೆ ಮಾತನಾಡಿದ್ದರು. ಕೂತುಕೊಂಡು ಮಾತಾಡಿ ಎಂದರೂ ನಿಂತುಕೊಂಡೇ ಸಂವಾದಲ್ಲಿ ಭಾಗಿಯಾಗಿದ್ದರು.
ಎಷ್ಟೊಂದು ವೇದಿಕೆಗಳಲ್ಲಿ ಜೊತೆಗಿದ್ದೆವು, ಅವರ ಮಾತು ಮತ್ತು ಬರಹಗಳಿಂದ ನಾನು ಎಷ್ಟೊಂದು ಕಲಿತಿದ್ದೇನೆ ಎನ್ನುವುದನ್ನು ನೆನಪು ಮಾಡಿಕೊಂಡಾಗ ಸಂಕಟವಾಗುತ್ತದೆ. ತೀರಾ ಅನಿರೀಕ್ಷಿತವಾದ ಸಾವು.
ಬರೆಹ-ದಿನೇಶ್ ಅಮೀನ್ ಮಟ್ಟು, ಲೇಖಕರು ಮತ್ತು ಹಿರಿಯ ಪತ್ರಕರ್ತರು


