ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ರೂಪಿಸಿ ಪ್ರಜಾತಂತ್ರವನ್ನು ರಕ್ಷಿಸಲು ತುಮಕೂರಿನಲ್ಲಿ ನಡೆದ 24ನೇ ಸಿಪಿಐಎಂ ರಾಜ್ಯ ಸಮ್ಮೇಳನದಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ತಿಳಿಸಿದರು.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದ ಅಳಿಸಿ, ಪ್ರಜಾತಂತ್ರ ಉಳಿಸಲು ಕೆಲಸ ಮಾಡಲು ಪಕ್ಷದ ರಾಜ್ಯ ಸಮ್ಮೇಳನ ನಿರ್ದಾರ ಕೈಗೊಂಡಿದೆ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ನವ ಉದಾರಿಕರಣದ ಹೆಸರಿನಲ್ಲಿ ದೇಶದಲ್ಲಿ ದಾಳಿ ನಡೆಸುತ್ತಿದ್ದು ಜನತೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇವುಗಳ ವಿರುದ್ಧ ರಾಜ್ಯಾಧ್ಯಂತ ಬಲವಾದ ಜನಾಂದೋಲನ ರೂಪಿಸಲಾಗುವುದು. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಜನಾಂದೋಲನ ರೂಪಿಸಿ ಕೋಮುವಾದಿ ಶಕ್ತಿಗಳನ್ನು, ಸರ್ಕಾರವನ್ನು ದುರ್ಬಲಗೊಳಿಸಲು ನಿರಂತರ ಹೋರಾಟ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕೃಷಿಯನ್ನು ಕಂಪನಿ ಕಾಯ್ದೆಯಡಿ ತರಲು, ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಅವರ ಜಮೀನುಗಳನ್ನು ಭೂ ಬ್ಯಾಂಕ್‌ಗೆ ಸೇರಿಸಲು ಪಿತೂರಿ ನಡೆಸಲಾಗುತ್ತಿದೆ ಇದರ ವಿರುದ್ದ ಫೆಬ್ರವರಿ 20, 2025ರಂದು ರಾಜ್ಯಾಧ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು.
ಬಡವರ ವಸತಿ ಸಮಸ್ಯೆ ನಿವಾರಣೆಗೆ ತುಮಕೂರಿನಿಂದ ಬೆಂಗಳೂರಿಗೆ, ಮೈಸೂರಿನಿಂದ ಬೆಂಗಳೂರು, ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು ಹಾಗೂ ಕೃಷಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರೈತರೊಂದಿಗೆ ಹೋರಾಟ ನಡೆಸಲು ಸಿಪಿಐಎಂ ನಿರ್ಧರಿಸಿದೆ.
ಆರ್‌ಎಸ್‌ಎಸ್ ನೇತೃತ್ದಲ್ಲಿ ಗುಲ್ಬರ್ಗದ ಸೇಡಂನಲ್ಲಿ ಹಮ್ಮಿಕೊಂಡಿರುವ ಭಾರತ ಸಂಸ್ಕೃತಿ ಉತ್ಸವ ಕಾರ್ಯಕ್ರಮವು ಕರ್ನಾಟಕದ ಶರಣ ಚಳವಳಿಯ ಮೇಲೆ ದಾಳಿ ನಡೆಸುವ ಹುನ್ನಾರವಾಗಿದೆ. ಶರಣರ, ಜನಪರ ಚಳವಳಿ ವಿರುದ್ದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಿಪಿಐಎಂ ಇದರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದು, ಶರಣ ಸಂಸ್ಕೃತಿ ಉಳಿಸಲು ಪೂರ್ಣ ಬೆಂಬಲ ನೀಡಲು ತೀರ್ಮಾನಿಸಲಾಗಿದೆ ಎಂದು ಯು. ಬಸವರಾಜು ತಿಳಿಸಿದರು.


