ಕಾನೂನು ಸಚಿವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಜಿಲ್ಲೆಯ ನೀರಾವರಿಗೆ ಅವರ ಯಾವುದೇ ಕೊಡುಗೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರಿಗೆ ಗಂಡಸ್ಥನ ಇದೆ ಎಂದು ತಿಳಿದುಕೊಂಡಿದ್ದೇನೆ. ಅದಿದ್ದರೆ ಪೂರ್ಣ 26 ಟಿಎಂಸಿ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ, ಸಚಿವ ಮಾಧುಸ್ವಾಮಿ ಅವರ ಹೆಸರನ್ನು ಹೇಳದೆ ಸವಾಲು ಹಾಕಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಜಯಚಂದ್ರ, ಸಿರಾ ತಾಲೂಕು ಮದಲೂರು ಕೆರೆ, ಕಳ್ಳಂಬೆಳ್ಳ ಮತ್ತು ಸಿರಾ ಕೆರೆಗಳಿಗೆ ನೀರು ಹರಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಹಲವು ಪತ್ರ ವ್ಯವಹಾರ ನಡೆಸಿ ಹೇಮಾವತಿ ನೀರು ಮದಲೂರು ಕೆರೆಗೆ ಹರಿಯವಂತೆ ಶ್ರಮ ಹಾಕಿದೆ. ಎಲ್ಲಿಯೂ ಸಿರಾ ತಾಲೂಕಿಗೆ ಹೇಮಾವತಿ ನೀರನ್ನು ಹರಿಸಬಾರದು ಎಂಬ ಆದೇಶ ಇಲ್ಲ. ಯಾವ ಇಲಾಖೆಯೂ ನೀರು ಹರಿಸಲು ಅಡ್ಡಿಪಡಿಸುತ್ತಿಲ್ಲ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾನೂನು ಸಚಿವರಿಗೆ ಸರಿಯಾದ ಮಾಹಿತಿ ಇಲ್ಲ. ಬರೀ ಸುಳ್ಳು ಹೇಳುತ್ತ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಾವೇನೂ ಭಿಕ್ಷೆ ಕೇಳುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಆದರೆ ಸಿರಾ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಬರುವುದಿಲ್ಲ ಎಂದು ಮತ್ತೆ ಅದೇ ಸುಳ್ಳಿನ ಸರಮಾಲೆ ಕಟ್ಟುತ್ತಿದ್ದಾರೆ. ಕುಡಿಯುವ ನೀರು ಹರಿಸಲು ರಾಜಕೀಯ ಮಾಡಬಾರದು ಎಂದು ಜಯಚಂದ್ರ ಕಿವಿಮಾತು ಹೇಳಿದರು.
ಸಿರಾ ಕೃಷ್ಣಾ ಕೊಳ್ಳದ ಯೋಜನೆ ವ್ಯಾಪ್ತಿಗೆ ಬರುತ್ತದೆ ಎಂದು ಕಾನೂನು ಸಚಿವರು ಹೇಳುತ್ತಾರೆ. ಹಾಗಾದರೆ ಅವರು ಆಯ್ಕೆಯಾಗಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರವೂ ಕೃಷ್ಣ ಬೇಸಿನ್ ವ್ಯಾಪ್ತಿಗೆ ಬರುತ್ತದೆ. ಅಲ್ಲಿಗೆ ಹೇಗೆ ಹೇಮಾವತಿ ನೀರನ್ನು ಹರಿಸುತ್ತಾರೆ. ಇದು ಅರ್ಥವಾಗುವುದಿಲ್ಲವೇ? ಪ್ರಕೃತಿದತ್ತವಾಗಿ ದೊರೆಯುವ ನೀರನ್ನು ಕುಡಿಯಲು ಹರಿಸುವುದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಹೇಮಾವತಿ ನಾಲೆ ಅಗಲೀಕರಣಕ್ಕೆ ಒತ್ತಾಯಿಸಿದೆ. ಸಿದ್ದರಾಮಯ್ಯ ಅವರು 560 ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಅದು 650 ಕೋಟಿಗೆ ಏರಿಕೆಯಾಯಿತು. 9 ತಿಂಗಳಲ್ಲಿ ನಾಲೆ ಅಗಲೀಕರಣ ಕಾಮಗಾರಿ ಮುಗಿಯಿತು. ಅದೇ ಕಾರಣಕ್ಕಾಗಿಯೇ ಜಿಲ್ಲೆಗೆ 19 ಟಿಎಂಸಿ ನೀರು ಜಿಲ್ಲೆಗೆ ಹರಿಯುತ್ತಿದೆ. ನಾಲೆ ಅಗಲೀಕರಣ ಕಾರ್ಯ ನಡೆಯದಿದ್ದರೆ ಇಷ್ಟೊಂದು ನೀರು ಹರಿಯುತ್ತಿರಲಿಲ್ಲ. ದ್ವೇಷ ಮಾಡುವುದನ್ನು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಗಂಡಸಾಗಿದ್ದರೆ ಪೂರ್ಣಪ್ರಮಾಣದ 26 ಟಿಎಂಸಿ ನೀರು ಹರಿಸಲಿ. ಆಗ ನಾನು ಸ್ವಾಗತಿಸುತ್ತೇನೆ ಎಂದರು.
ಈಗಿನ ಕಾನೂನು ಸಚಿವರಿಗೆ ರಾಜ್ಯದ ಮತ್ತು ಜಿಲ್ಲೆಯ ನೀರಾವರಿಗೆ ಯಾವುದೇ ಕಾಂಟ್ರಿಬ್ಯೂಷನ್ ಇಲ್ಲ. ಬರೀ ಸುಳ್ಳು ಹೇಳುವುದು ಬಿಟ್ಟರೆ ಯಾವ ಕೆಲಸವೂ ಆಗಿಲ್ಲ ಎಂದು ಟೀಕಿಸಿದರು.
ಮದಲೂರು ಕೆರೆಗೆ ಹೇಮಾವತಿ ನೀರುಹರಿಸುವ ಸಂಬಂಧ ಬಿಜೆಪಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಟೀಕಾಪ್ರಹಾರ ನಡೆಸುತ್ತಿವೆ. ಹೇಮಾವತಿ ನೀರು ಹರಿಸುವ ವಿಚಾರ ತಾರಕಕ್ಕೇರಿದೆ. ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.