Thursday, June 13, 2024
Google search engine
Homeಮುಖಪುಟಶ್ರೀಗಂಧ ಮಾಫಿಯಾ ತಡೆ ಯಾಕಿಲ್ಲ?

ಶ್ರೀಗಂಧ ಮಾಫಿಯಾ ತಡೆ ಯಾಕಿಲ್ಲ?

ಅರಣ್ಯ ಅಧಿಕಾರಿಗಳ ದಾಳಿ ನಡುವೆಯೂ ಶ್ರೀಗಂಧದ ಮರಗಳನ್ನು ಕಡಿದು ಸಾಗಾಣಿಕೆ ಮಾಡುವುದೇನೂ ನಿಂತಂತೆ ಕಾಣುತ್ತಿಲ್ಲ. ಅದು ನಿಲ್ಲವ ಲಕ್ಷಣಗಳೂ ಇಲ್ಲ. ನಗರದ ಪ್ರಮುಖ ಬಡಾವಣೆಯ ಮನೆ ಮುಂದೆ ಬೆಳೆಸಿರುವ ಶ್ರೀಗಂಧದ ಮರವನ್ನೇ ಯಾರ ಗಮನಕ್ಕೂ ಬರದಂತೆ ಕಡಿದು ಸಾಗಿಸುವುದು ನಡೆಯುತ್ತಲೇ ಇದೆ ಅಂದರೆ ಇನ್ನೂ ಅರಣ್ಯದಲ್ಲಿ ಶ್ರೀಗಂಧದ ಮರಗಳು ಕಣ್ಮರೆಯಾಗುವುದರಲ್ಲಿ ಅಚ್ಚರಿಯೇನೂ ಇಲ್ಲ.

ಶ್ರೀಗಂಧದ ಮರಗಳ ಕಳವು ಹಿಂದಿನಿಂದಲೂ ನಡೆದುಕೊಂಡು ಬರುತ್ತಲೇ ಇದೆ. ದಾಳಿಯೂ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದೆ. ಅರಣ್ಯ ಅಧಿಕಾರಿಗಳು ನೆಪಮಾತ್ರಕ್ಕೆ ದಾಳಿ ಮಾಡುತ್ತಾರೋ ಅಥವಾ ನಿಜವಾಗಿಯೂ ಶ್ರೀಗಂಧ ಕಳವು ಸಂಪೂರ್ಣ ನಿಲ್ಲಿಸುವ ಉದ್ದೇಶದಿಂದ ನಡೆಯುತ್ತದೋ ಗೊತ್ತಿಲ್ಲ. ಅಂತೂ ಅರಣ್ಯಾಧಿಕಾರಿಗಳು ಮಾತ್ರ ದಾಳಿ ಮಾಡಿ ಹತ್ತನ್ನೆರಡು ಗಂಧದ ತುಂಡುಗಳನ್ನು ವಶಪಡಿಸಿಕೊಂಡಿರುವ ನಿದರ್ಶನಗಳು ಕಣ್ಣ ಮುಂದೆ ಇವೆ.

ಶ್ರೀಗಂಧದ ಕಳ್ಳರನ್ನು ಹಿಡಿಯುವುದಷ್ಟೇ ಆದರೆ ಅದರಿಂದೇನೂ ಪ್ರಯೋಜನವಿಲ್ಲ. ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಅರಣ್ಯಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿ. ದಾಳಿ ಮಾಡಿದಾಗ ಮಾಧ್ಯಮಗಳಿಗೆ ಸುದ್ದಿ ನೀಡುವ ಇದೇ ಅಧಿಕಾರಿಗಳು ಆರೋಪಿಗಳಿಗೆ ಶಿಕ್ಷೆಯಾದಾಗ ಅದನ್ನು ಸುದ್ದಿಯಾಗುವಂತೆ ನೋಡಿಕೊಂಡ ಉದಾಹರಣೆಗಳು ವಿರಳಾತಿವಿರಳ. ಇದನ್ನು ಗಮನಿಸಿದರೆ ಗಂಧ ಕಳ್ಳರ ಮೇಲೆ ದಾಳಿ ಮಾಡುವಾಗ ಇದ್ದ ಹುಮ್ಮಸ್ಸು ಅರಣ್ಯಾಧಿಕಾರಿಗಳು ನಂತರ ಇರುವುದಿಲ್ಲ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವ ಸಂಗತಿ.

ಅರಣ್ಯ ಮತ್ತು ಪೊಲೀಸ್ ಇಲಾಖೆ ಇದುವರೆಗೂ ಗಂಧಕಳ್ಳರನ್ನು ಮಾತ್ರ ಬಂಧಿಸಿದೆಯೇ ಹೊರತು, ಶ್ರೀಗಂಧದ ಮಾಫಿಯಾ ಯಾರು ನಡೆಸುತ್ತಿದ್ದಾರೆ. ಶ್ರೀಗಂಧದ ಜಾಲ ಯಾವ ರೀತಿ ನಡೆಯುತ್ತಿದೆ. ಜಾಲದ ಪ್ರಮುಖ ರೂವಾರಿ ಯಾರು? ಕಳುವಾದ ಶ್ರೀಗಂಧದ ತುಂಡುಗಳು ಎಲ್ಲಿಗೆ ರವಾನೆಯಾಗುತ್ತವೆ. ವಾರ್ಷಿಕ ಶ್ರೀಗಂಧದ ಕಳವು ಮಾಡುವುದರಿಂದ ನಡೆಯುವ ವಹಿವಾಟು ಎಷ್ಟು? ಕದ್ದ ಮಾಲು ಎಲ್ಲಿಗೆ ಹೋಗಿ ಬೀಳುತ್ತಿದೆ. ಹಣ ಮಾಡುತ್ತಿರುವವರು ಯಾರು? ಎಂಬ ಬಗ್ಗೆ ಇದುವರೆಗೂ ಮಾಹಿತಿ ಹೊರ ಹಾಕಿದಂತಿಲ್ಲ.

ಶ್ರೀಗಂಧದ ಕೆಲವೇ ತುಂಡುಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯ ಕಟ್ಟಲಾಗುತ್ತದೆ. ಇನ್ನು ಟನ್ ಗಟ್ಟಲೆ ವಹಿವಾಟು ನಡೆಸುವ ಆ ಜಾಲ ಎಷ್ಟು ಹಣ ಮಾಡಬಹುದೆಂಬುದನ್ನು ಊಹಿಸುವುದೂ ಕಷ್ಟ. ಶ್ರೀಗಂಧದ ಕಳ್ಳಸಾಗಣೆ ಜಾಲವನ್ನು ಇದುವರೆಗೂ ಬೇಧಿಸುವ ಪ್ರಾಮಾಣಿಕ, ಪಾರದರ್ಶಕ ಮತ್ತು ಖಡಕ್ ಅಧಿಕಾರಿ ಬಂದಿಲ್ಲ ಎಂಬುದು ನೋವಿನ ಸಂಗತಿ.

ಕಾಡುಗಳ್ಳ ವೀರಪ್ಪನ್ ಶ್ರೀಗಂಧ ಮತ್ತು ಆನೆ ದಂತಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಎಂಬ ಆರೋಪವೇನೂ ಸರಿ. ಆದರೆ ಅಷ್ಟೊಂದು ಪ್ರಮಾಣದ ವಹಿವಾಟು ನಡೆಸಿದ ಹಣವನ್ನೆಲ್ಲಾ ಎಲ್ಲಿ ಸಂಗ್ರಹಿಸಿದ ಎಂಬ ಸತ್ಯ ಹೊರಬೀಳಲೇ ಇಲ್ಲ. ವೀರಪ್ಪನ್ ಸಾವಿನೊಂದಿಗೆ ಎಲ್ಲಾ ಸತ್ಯಗಳೂ ಮಣ್ಣುಗೂಡಿದವು. ವೀರಪ್ಪನ್ ಹಿಂದೆ ಇದ್ದ ಭ್ರಷ್ಟ ಜಾಲದಲ್ಲಿ ಯಾರಿದ್ದಾರೆಂಬ ಸಣ್ಣ ಸುಳಿವೂ ಕೂಡ ಹೊರಬರಲೇ ಇಲ್ಲ. ಸತ್ಯವನ್ನು ವ್ಯವಸ್ಥಿತವಾಗಿ ರಹಸ್ಯವಾಗಿಯೇ ಇಡಲಾಯಿತು ಅಥವಾ ಹಾಗೆ ನೋಡಿಕೊಳ್ಳಲಾಯಿತು.

ಈಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಕೆರೆ ಮತ್ತು ಕಂಪ್ಲಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಡಿಯುತ್ತಿದ್ದ ಕೂಲಿಕಾರ್ಮಿಕರ ಮೇಲೆ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ್ದು ಓರ್ವ ಮೃತಪಟ್ಟಿದ್ದಾನೆ. ಈ ಭಾಗದ ಗ್ರಾಮದ ಕೆಲ ಯುವಕರು ಕೂಲಿ ಸಿಗುವುದೆಂಬ ಆಸೆಗಾಗಿ ಮೀಸಲು ಅರಣ್ಯಕ್ಕೆ ಹೋಗಿ ಶ್ರೀಗಂಧದ ಮರಗಳನ್ನು ಕಡಿದು ತರುವುದು ಸಾಮಾನ್ಯವಾಗಿ ನಡೆಯುತ್ತಿದೆ. ಗ್ರಾಮದಲ್ಲಿ ಯಾರನ್ನು ಕೇಳಿದರೂ ಹೇಳುವ ಸತ್ಯ ಇದು.

ಕಂಪ್ಲಾಪುರ ಮೀಸಲು ಅರಣ್ಯ 3500 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅರಣ್ಯ ಇಲಾಖೆ ಇಲ್ಲಿ ಶ್ರೀಗಂಧದ ಗಿಡಗಳನ್ನು ಬೆಳೆಸಿದೆ. ಲಕ್ಷಾಂತರ ಮರಗಳು ಬೆಳೆದು ನಿಂತಿವೆ. ಕೆಂಕೆರೆ ಅರಣ್ಯ ಪ್ರದೇಶದಲ್ಲೂ ನೈಸರ್ಗಿಕವಾಗಿ ಬೆಳೆದ ಶ್ರೀಗಂಧದ ಮರಗಳು ಇವೆ. ಬೃಹತ್ ಪ್ರಮಾಣದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಿರುವ ಮೀಸಲು ಅರಣ್ಯ ಪ್ರದೇಶದ ಕಾವಲಿಗೆ ಬೆರಳೆಣಿಕೆಯ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವುದೂ ಕೂಡ ಗಂಧ ಕಳ್ಳ ಸಾಗಾಣಿಕೆಗೆ ಅನುವು ಮಾಡಿಕೊಟ್ಟಿದೆ. ಇಂತಹ ಕಡೆ ಸಿಬ್ಬಂದಿಯನ್ನು ಹೆಚ್ಚಿಸಬೇಕು.

ಓರ್ವ ಕೂಲಿಕಾರ್ಮಿಕ ಅರಣ್ಯಾಧಿಕಾರಿ ಹಾರಿಸಿದ ಗುಂಡಿಗೆ ಬಲಿಯಾಗಿದ್ದು, ಇದುವರೆಗೂ ಆತನ ಹೆಸರು, ವಿಳಾಸ ಪತ್ರೆ ಮಾಡಲು ಆಗಿಲ್ಲ. ಕೇವಲ ಸಣ್ಣ ಮಿಕವನ್ನು ಹಿಡಿಯುವುದರಿಂದ ಶ್ರೀಗಂಧಧ ಕಳ್ಳ ಜಾಲವನ್ನು ಪತ್ತೆ ಮಾಡಲು ಆಗುವುದಿಲ್ಲ. ಈ ಸತ್ಯ ಸರ್ಕಾರ ಮತ್ತು ಇಲಾಖೆಗೆ ಗೊತ್ತಿರಬೇಕು. ಶ್ರೀಗಂಧದ ಕಳ್ಳಜಾಲದ ಕುರಿತು ಅರಣ್ಯಾಧಿಕಾರಿಗಳಿಗೆ ಗೊತ್ತಿದ್ದರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಮಾಮೂಲಿ ಹೋಗುವುದರಿಂದ ನೆಪಮಾತ್ರದ ದಾಳಿ ಮಾಡುವ ಕೆಲಸಗಳು ನಡೆಯುತ್ತಿವೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.

ಹೌದು, ನಿಜವಾಗಿಯೂ ಶ್ರೀಗಂಧ ರವಾನೆಯಾಗುತ್ತಿರುವ ಮೂಲವನ್ನು ಪತ್ತೆಹಚ್ಚಬೇಕು ಇಂತಹ ಜಾಲವನ್ನು ಬುಡಸಮೇತ ಕಿತ್ತುಹಾಕುವುದು ಹೇಗೆಂಬ ಕುರಿತು ತಂತ್ರಗಾರಿಕೆ ರೂಪಿಸಬೇಕು. ಜಾಲದ ಜಾಡು ಹಿಡಿದರೆ ಹಳ್ಳಿಯ ಜನ ಅರಣ್ಯದತ್ತ ಹೋಗುವುದನ್ನೇ ನಿಲ್ಲಿಸುತ್ತಾರೆ. ಬಲಿಷ್ಟರನ್ನು ಮಟ್ಟಹಾಕದೆ ಹೋದರೆ ಗ್ರಾಮದ ಸಾಮಾನ್ಯ ಕೂಲಿಕಾರ್ಮಿಕನೊಬ್ಬ ಹೆಣವಾಗಿ ಬೀಳುತ್ತಲೇ ಇರುತ್ತಾನೆ. ಸರ್ಕಾರ ಮತ್ತು ಇಲಾಖೆಗಳು ಈ ಬಗ್ಗೆ ಗಮನಹರಿಸಬೇಕು.

ಕೆ.ಈ.ಸಿದ್ದಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments