Friday, March 14, 2025
Google search engine
Homeಮುಖಪುಟತುಮಕೂರು ಅಭಿವೃದ್ದಿಗೆ ರೂ. 200 ಕೋಟಿ ಅನುದಾನ–ಸಚಿವ ಜಿ. ಪರಮೇಶ್ವರ್

ತುಮಕೂರು ಅಭಿವೃದ್ದಿಗೆ ರೂ. 200 ಕೋಟಿ ಅನುದಾನ–ಸಚಿವ ಜಿ. ಪರಮೇಶ್ವರ್

ತುಮಕೂರು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ, ರಸ್ತೆ ಬದಿ ಚರಂಡಿ ನಿರ್ಮಾಣ, ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣ, ಪಾದಚಾರಿ ಮಾರ್ಗ, ನಗರದ ಒಳ ಮತ್ತು ಹೊರ ವರ್ತುಲ ರಸ್ತೆ, ಪ್ರಮುಖ ವೃತ್ತಗಳು, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ 200 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಅನುದಾನವನ್ನು ಸದ್ಬಳಕೆ ಮಾಡಿಕೊಂಡು ತುಮಕೂರು ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಬೇಕೆಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಸರ್ಕಾರದಿಂದ ತುಮಕೂರು ಸೇರಿ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ತಲಾ 200 ಕೋಟಿ ರೂ.ಒದಗಿಸಲಾಗಿದೆ. ಬಿಡುಗಡೆಯಾಗುವ ಹಣವನ್ನು ಕಾಮಗಾರಿಗಳಿಗೆ ಸದ್ವಿನಿಯೋಗಿಸಿ 2026-27ನೇ ಸಾಲಿನೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಯೋಜನೆಯಡಿ ಒದಗಿಸಲಾಗುವ 200 ಕೋಟಿ ರೂ.ಗಳ ಅನುದಾನದಲ್ಲಿ ಪರಿಶಿಷ್ಟ ಜಾತಿ/ ಗಿರಿಜನ ಉಪಯೋಜನೆಗಳಿಗೆ 24.10ರಷ್ಟು ಮೊತ್ತವನ್ನು ಮೀಸಲಿಡಬೇಕು. ಕಾಮಗಾರಿಗಳಿಗೆ ತಗಲುವ ಅಂದಾಜು ವೆಚ್ಚದ ಕ್ರಿಯಾಯೋಜನೆ ತಯಾರಿಸಬೇಕು. ಕ್ರಿಯಾಯೋಜನೆ ತಯಾರಿಸುವಾಗ ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ನಿರ್ದೇಶಿಸಿದರು.

ನಗರದ ಖಾಸಗಿ ಬಸ್‌ನಿಲ್ದಾಣ ಪುನರಾಭಿವೃದ್ಧಿ, ಲಿಂಗಾಪುರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕಸಾಯಿ ಖಾನೆ, 2 ಕೋಟಿ ರೂ. ವೆಚ್ಚದಲ್ಲಿ ಮಾಂಸ ಮಾರಾಟ ವಲಯಗಳ ನಿರ್ಮಾಣ, 5 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಆವರಣದಲ್ಲಿ ಬಹು ಹಂತದ ವಾಹನ ನಿಲುಗಡೆ ವ್ಯವಸ್ಥೆ, ಅಕ್ಕ-ತಂಗಿ ಕೆರೆ ಬಳಿ ಉದ್ಯಾನವನ ಅಭಿವೃದ್ಧಿ, ಅಮಾನಿಕೆರೆ ಬಳಿ ತಾರಾಲಯ ನಿರ್ಮಾಣ ಹಾಗೂ ಯುವಿ/ಮೆಂಬ್ರೇನ್ ನೀರು ಶುದ್ಧೀಕರಣ ಘಟಕ, ಮರಳೂರು ಕೆರೆಯಲ್ಲಿ ನೀರು ಸಂರಕ್ಷಣಾ ಘಟಕ ನಿರ್ಮಾಣ, ಅಭಿವೃದ್ಧಿಯಾಗದ ಉದ್ಯಾನವನಗಳ ಅಭಿವೃದ್ಧಿ, ಕುಡಿಯುವ ನೀರು ಸರಬರಾಜು ಹಾಗೂ ಬೀದಿ ದೀಪ ವ್ಯವಸ್ಥೆಗಾಗಿ ಈ ಅನುದಾನವನ್ನು ವಿನಿಯೋಗಿಸಬೇಕು ಎಂದು ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular