ಶ್ರೇಷ್ಠ ಆರ್ಥಿಕ ತಜ್ಞ ಧೀಮಂತ ವ್ಯಕ್ತಿತ್ವದ ಡಾ. ಮನಮೋಹನ ಸಿಂಗ್ ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೇರುತ್ತಾ ಪ್ರಧಾನಿ ಹುದ್ದೆಗೆ ಬಂದು ದೇಶದ ಆರ್ಥಿಕತೆಯಲ್ಲಿ ಸ್ಥಿರತೆ ತಂದ ಸರಳ ಸಜ್ಜನಿಕೆಯ ವ್ಯಕ್ತಿ. ಅವರ ಮರಣ ಜಗತ್ತಿನ ಆರ್ಥಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಡಾ. ಮನಮೋಹನ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್ಚು ಮಾತನಾಡದ ಸಿಂಗ್ ಸದಾ ಕ್ರಿಯಾಶೀಲರಾಗಿದ್ದು ಆಹಾರ ಭದ್ರತೆಯಂತಹ ಕಾರ್ಯಕ್ರಮವನ್ನು ರೂಪಿಸಿದ ಜನಪರ ಕಾಳಜಿಯುಳ್ಳ ಪ್ರಧಾನಿ ಆಗಿದ್ದರು ಎಂದರು.
ಡಾ. ಸಿದ್ಧಲಿಂಗಯ್ಯ ಮಾತನಾಡಿ, ಬೋಧಕ ವರ್ಗಕ್ಕೆ ಭದ್ರತೆಯನ್ನು ನೀಡಲು ಮತ್ತು ಪ್ರತಿಭಾ ಪಲಾಯನವನ್ನು ತಡೆಗಟ್ಟಲು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅವರು ತಂದ ಯೋಜನೆಗಳು ಫಲಕಾರಿಯಾಗಿ ಉತ್ತಮ ಸಂಶೋಧನೆಗಳು ಬರಲು ಕಾರಣವಾದವು ಎಂದರು.
ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಹಣಕಾಸು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಭಾರತವನ್ನು ಜಾಗತೀಕರಣದತ್ತ ಕೊಂಡೊಯ್ದು ದೇಶದಲ್ಲಿ ಉದಾರೀಕರಣ ಜಾರಿಗೆ ತಂದರು. ಎರಡು ಬಾರಿ ಹತ್ತು ವರ್ಷಗಳ ಕಾಲ ಪ್ರಧಾನಿ ಆಗಿದ್ದ ಅವರು ಎರಡನೇ ಅವಧಿಯಲ್ಲಿ ತಮ್ಮ ಸರ್ಕಾರಕ್ಕೆ ಸ್ಥಿರತೆಯನ್ನು ನೀಡಲು ಪ್ರಯತ್ನಿಸಿ ತಮ್ಮ ಮಿತ್ರಪಕ್ಷಗಳಿಂದ ಹಲವಾರು ಸಮಸ್ಯೆಗಳಿಗೆ ಸಿಲುಕಿದರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ, ಸಂಚಾಲಕ ಕೆ.ಎಸ್.ಉಮಾಮಹೇಶ್, ತುಮಕೂರು ತಾಲ್ಲೂಕು ಕಸಾಪ ಅಧ್ಯಕ್ಷ ಶಿವಕುಮಾರ್, ಚಾಂದು ಇತರರಿದ್ದರು.