ವ್ಯಕ್ತಿಗಳ ನಿಜವಾದ ಗುಣ ಬಹಿರಂಗವಾಗುವುದು ಅಧಿಕಾರ ದೊರೆತಾಗ.ಅದರಲ್ಲೂ ಅಧಿಕಾರ ಅಚಾನಕ್ಕಾಗಿ ಸಿಕ್ಕರೆ ಕತ್ತಿನ ಮೇಲೆ ತಲೆ ನಿಲ್ಲುವುದಿಲ್ಲ.
ಮನಮೋಹನ ಸಿಂಗ್ ಪಿ ವಿ ನರಸಿಂಹರಾವ್, ಸೋನಿಯಾ ಕೃಪೆಯಿಂದ ವಿತ್ತಮಂತ್ರಿ, ಪ್ರಧಾನ ಮಂತ್ರಿ ಆದವರು. ಕನಸಲ್ಲೂ ದೊರಕದ ಈ ಸ್ಥಾನಕ್ಕೇರಿದರೂ ಅಹಂಕಾರ, ಲಾಲಸೆ ಅವರ ಬಳಿ ಸುಳಿಯಲಿಲ್ಲ. ಇಂದು ಅಪರೂಪವಾಗುತ್ತಿರುವ ನಿಗರ್ವ, ಪ್ರಾಮಾಣಿಕತೆ ಅವರು ವ್ಯಕ್ತಿತ್ವದ ಅವಿಭಾಜ್ಯ ಅಂಗಗಳೇ ಆಗಿದ್ದವು.
ಹೊಸ ಆರ್ಥಿಕ ನೀತಿಯ ಹರಿಕಾರನಾಗಿ ದೇಶವನ್ನು ಹೊಸ ರೀತಿಯಲ್ಲಿ ಕಟ್ಟಲು ಶ್ರಮಿಸಿದವರು ಅವರು. ನವ ಉದಾರೀಕರಣದ ಕುರಿತು ಹಲವು ಟೀಕೆಗಳು ಇವೆಯಾದರೂ ಜಾಗತಿಕ ಆರ್ಥಿಕ ನೀತಿ ಮಗ್ಗುಲು ಬದಲಾಯಿಸುತ್ತಿರುವ ಹೊತ್ತಿನಲ್ಲಿ ಭಾರತ ಹಿಂದುಳಿಯಲು ಸಾಧ್ಯವಿರಲಿಲ್ಲ. ಅವರ ಆರ್ಥಿಕ ನೀತಿ ದುರ್ಲಾಭಕ್ಕೆ ಎಡೆಗೊಟ್ಟರೂ ಇದು ನೀತಿಯ ವೈಫಲ್ಯವಲ್ಲ.ಬಂಡವಾಳಶಾಹಿ ಲಾಭಬಡುಗರು ಮತ್ತು ಅವರ ಮರೆಯಲ್ಲಿರುವ ಮೂಲಭೂತಭೂತವಾದಿಗಳು ನವ ಆರ್ಥಿಕತೆ ಜನಸಾಮಾನ್ಯರಿಗೆ ತಲುಪದಂತೆ ನೋಡಿಕೊಂಡರು.
ಮನಮೋಹನ್ ಸಿಂಗ್ ಅವರನ್ನಾಗಲೀ, ಅವರ ಉದ್ದೇಶವನ್ನಾಗಲೀ ಸಂಶಯಿಸಲು ಸಾಧ್ಯವಿಲ್ಲ. ಅವರು ಬೆಳೆದ ಫಲ ಕೈಗೆಟುಕುವ ಮೊದಲೇ ಅನ್ಯರ ಪಾಲಾಯಿತು. ಮಾಡದ ತಪ್ಪನ್ನು ಹೊರಿಸಿಲಾಯಿತು.ಸುಳ್ಳು ಆಪಾದನೆಗಳನ್ನು ಮಾಡಿ ನೋಯಿಸಲಾಯಿತು.ನೈಜ ಪ್ರಜಾಪ್ರಭುತ್ವವಾದಿಯಾಗಿ ಸಂಪುಟದ, ಸಂಸತ್ತಿನ ಎಲ್ಲರನ್ನೂ ಸಮಾನವಾಗಿ ನಡೆಸಿಕೊಂಡಿದ್ದೇ ಅಪರಾಧವಾಯಿತು.ಆದರೆ ಅವರು ಅವೆಲ್ಲವನ್ನೂ ಸಂಯಮದಿಂದ ಸಹಿಸಿಕೊಂಡರು
ಮನಮೋಹನ ಸಿಂಗ್ ರ ಅಧಿಕಾರದ ಕೊನೆಯ ಅವಧಿ, ವರ್ತಮಾನ ಹಿತಕರವಾಗಿರಲಿಲ್ಲ. ಒಬ್ಬ ಆರ್ಥಿಕ ತಜ್ಞ, ಪ್ರಾಮಾಣಿಕ, ಸಜ್ಜನ, ದೇಶಪ್ರೇಮಿಯನ್ನು ನಡೆಸಿಕೊಳ್ಳುವ ರೀತಿ ಇದಾಗಿರಲಿಲ್ಲ. ಬದುಕಿರುವಾಗ ಟೀಕೆ, ಟಿಪ್ಪಣಿ ಮಾಡುವ ನಾವು ಸತ್ತ ನಂತರ ಹೊಗಳುವುದರಲ್ಲಿ ಗಟ್ಟಿಗರು. ಮನಮೋಹನ್ ಸಿಂಗ್ ಅವರಿಗೆ ಸಿಗಬೇಕಾದ ಬೆಲೆ, ನ್ಯಾಯ ಇನ್ನಾದರೂ ದೊರೆಯುವಂತಾಗಲಿ.
ಬರೆಹ-ನಾಗರಾಜ ಶೆಟ್ಟಿ, ಲೇಖಕರು.


