ಡಾ. ಮನಮೋಹನ್ ಸಿಂಗ್ ಅವರ ನಿಧನದ ಬಳಿಕ ಇಂದು ಬೆಳಗ್ಗಿನ ಮೂರು ಪತ್ರಿಕೆಗಳು “ಚಿರಮೌನ” ಎಂಬ ಪದವನ್ನು ಬಳಸಿವೆ. ಮನಮೋಹನ್ ಸಿಂಗ್ ಅವರದು “ಮೌನ” ಎಂಬ ನೆರೇಟಿವ್‌ನಿಂದ ಪ್ರೇರಿತವಾದ ಈ ಶೀರ್ಷಿಕೆಗಳ ಹಿಂದಿನ ಕ್ರೌರ್ಯ, ನಮ್ಮ ಇಂದಿನ ಸಾಮಾಜಿಕ ಬದುಕಿನ ಕೆಡುಕಿನ ಸ್ಥಿತಿಗೆ ಹಿಡಿದ ಕನ್ನಡಿ. ಇಂದು ಮಾತು ಮನೆ ಕೆಡಿಸಿದ್ದನ್ನು ನೋಡಿದ ಬಳಿಕ ನಮಗೆ ಮೌನದ ಮೌಲ್ಯ ನಿಧಾನಕ್ಕೆ ಅರ್ಥ ಆಗತೊಡಗಿದೆ. ಮಾತಾಡಲೇಬೇಕಾದಲ್ಲಿ ಎಂದೂ ಮನಮೋಹನ್ ಸಿಂಗ್ ಹಿಂಜರಿದಿರಲಿಲ್ಲ; ಅನಗತ್ಯ ಮಾತೂ ಇರಲಿಲ್ಲ. ಆಡಿದ್ದು-ಮಾಡಿದ್ದು ಎಲ್ಲವೂ ತೂಕದ್ದೇ. ಹಾಗಾಗಿಯೇ ಸ್ವತಃ ಮನಮೋಹನ್ ಅವರು ಪ್ರಧಾನಿ ಆಗಿ ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು- History will be kinder to me.
ದೇ ಶಿವಾ ಬಾರ್ ಮೋಹೇ ಇಹೇ,
ಶುಭ ಕರ್ಮನ್ ತೇ ಕಬೂ ನ ತಾರೂನ್;
ನ ದಾರೂಂ ಅರೀ ಸೆ ಜಬ್ ಜಾಯೇ ಲಡೂಂ
ನಿಶ್ಚಯ್ ಕರ್ ಅಪ್ನೀ ಜೀತ್ ಕರೂನ್.
[ದೇವರೇ ಸರ್ವಶಕ್ತನಾದ ನೀನು ನನಗೆ ಈ ವರವನ್ನು ಕೊಡು. ಯಾವತ್ತೂ ಒಳ್ಲೆಯ ಕೆಲಸಗಳಿಂದ ನಾನು ಹಿಂಜರಿಯದಂತೆ ಅನುಗ್ರಹಿಸು. ಬದುಕಿನ ಯುದ್ಧದಲ್ಲಿ ವೈರಿಗಳ ಎದುರು ಭಯವಿಲ್ಲದೇ, ಆತ್ಮವಿಶ್ವಾಸ ಮತ್ತು ದೃಢತೆಯಿಂದ ಹೋರಾಡಿ ಗೆಲ್ಲುವುದಕ್ಕೆ ಶಕ್ತಿ ಕರುಣಿಸು]
ಇದು ಡಾ.ಸಿಂಗ್ ಅವರ ಇಷ್ಟದ, ಅವರು ಯಾವಾಗಲೂ ಗುನುಗುತ್ತಿದ್ದ ಗುರ್ಬಾನಿ.
ತನ್ನ ಬದುಕಿನ ಉದ್ದಕ್ಕೂ ಇದೇ ತತ್ವವನ್ನು ಅಳವಡಿಸಿಕೊಂಡ ಡಾ. ಸಿಂಗ್, ಭಾರತಕ್ಕೆ ಸಕಾಲದಲ್ಲಿ ಒದಗಿದ ಆಸರೆ. ಅವರು ಹಣಕಾಸು ಸಚಿವರಾಗಿ ತನ್ನ ಚೊಚ್ಚಲ ಬಜೆಟ್ ಭಾಷಣದಲ್ಲಿ (1991) ವಿಕ್ಟರ್ ಹ್ಯೂಗೋನ ಪ್ರಸಿದ್ಧ ಮಾತು “ತನ್ನ ಸಮಯ ಬಂದಿರುವ ಹೊಸ ಚಿಂತನೆಯೊಂದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು” ಎಂಬ ಮಾತನ್ನು ಉಲ್ಲೇಖಿಸಿ, “ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವುದು ಅಂತಹದೇ ಒಂದು ಚಿಂತನೆ. ಇಡಿಯ ಜಗತ್ತು ಏರುಧ್ವನಿಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಿ. ಭಾರತ ಈಗ ಎಚ್ಚೆತ್ತಿದೆ. ನಾವು ಸಾಧಿಸಿ ತೋರಿಸುತ್ತೇವೆ. ನಾವು ಗೆದ್ದೇ ಗೆಲ್ಲುತ್ತೇವೆ” ಎಂದಿದ್ದರು.
ಇಂದು ಭಾರತಕ್ಕೆ ಜಗತ್ತಿನ ಆರ್ಥಿಕತೆಯಲ್ಲಿ ಐದನೇ ಸ್ಥಾನ, ಅದೆಷ್ಟೋ ಟ್ರಿಲಿಯನ್ ಎಕಾನಮಿ ಎಂದು ಹೇಳುವಾಗ, ಆ ಪ್ರತೀ ಪದವೂ ಡಾ. ಸಿಂಗ್ ಅವರಿಗೆ ಋಣಿ ಆಗಿರಬೇಕು.
ಪರಿಣತ ಸರ್ಜನ್‌ನಂತೆ ಒಂದೆಡೆ ಉದಾರೀಕರಣಕ್ಕೆ ಹಾದಿ ತೆರೆದುಕೊಡುತ್ತಾ, ಇನ್ನೊಂದೆಡೆ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಕ್ರಮಗಳನ್ನೂ ತೆಗೆದುಕೊಳ್ಳುತ್ತಾ ಸಾಗಿದ ಮನಮೋಹನ್ ಸಿಂಗ್ ಅವರಿಗೆ ಹಾದಿಯುದ್ದಕ್ಕೂ ನೂರಾರು ರಾಜಕೀಯ, ಆರ್ಥಿಕ ಸವಾಲುಗಳು ಎದುರಾಗಿದ್ದವು. ತನ್ನ ನೀತಿಗಳಿಗೆ ಎಡ ಮತ್ತು ತಮ್ಮದೇ ಪಕ್ಷದವರ ವಿರೋಧ, ಪ್ರತಿಪಕ್ಷಗಳ ಸಮಯಸಾಧಕತನ – ಎರಡನ್ನೂ ಇಡಬೇಕಾದಲ್ಲಿ ಇರಿಸಿ, ತನ್ನ ನೆಚ್ಚಿನ ಗುರ್ಬಾನಿಯಂತೆಯೇ ದೃಢತೆಯಿಂದ ಹೋರಾಡಿದ ಸಿಂಗ್ ಆಧುನಿಕ ಭಾರತಕ್ಕೆ ಬಲವಾದ ಅಡಿಪಾಯ ನಿರ್ಮಿಸಿದರು. ಜಗತ್ತೆಲ್ಲ ಒಂದು ಹಾದಿಯಲ್ಲಿ (ಉದಾರೀಕರಣದ) ಮುನ್ನುಗ್ಗುತ್ತಿದ್ದಾಗ, ಏನೇನೂ ಕೊರತೆ ಇಲ್ಲದಂತೆ ಭಾರತವನ್ನೂ ಆ ಹಾದಿಯಲ್ಲಿ ಶಿಸ್ತಿನಿಂದ ಕರೆದೊಯ್ದು ಸಾಕಷ್ಟು ಮುಂಚೂಣಿಯಲ್ಲೇ ನಿಲ್ಲಿಸಿದರು; ಅದರ ಕ್ರೆಡಿಟ್ ಕೂಡ ಪಡೆಯದೇ, ಏನೂ ಆಗೇ ಇಲ್ಲ ಎಂಬಂತೆ ತೆರೆಮರೆಗೆ ಸರಿದರು. ಅದು ಅವರ (ಈ ದೇಶಕ್ಕೆ ಸಕಾಲದಲ್ಲಿ ಒದಗಿಬಂದ) ದೊಡ್ಡತನ.
ಒಂದು ವೇಳೆ, ಅವರ ಪ್ರಧಾನಿ ಹುದ್ದೆಯ ಎರಡು ಅವಧಿಗಳಲ್ಲಿ ಅವರಿಗೆ “ಫ್ರೀ ಹ್ಯಾಂಡ್” ಸಿಕ್ಕಿದ್ದರೆ ಭಾರತ ಇನ್ನಷ್ಟು ಸಶಕ್ತವಾಗಿರುತ್ತಿತ್ತು. ಆಗ ಉದಾರೀಕರಣವನ್ನು ಕದ್ದುಮುಚ್ಚಿ ಮಾಡಬೇಕಾಗಿ ಬಂದದ್ದರ ಫಲವನ್ನು ಈಗ ನಾವು ಅನುಭವಿಸುತ್ತಿದ್ದೇವೆ. ಇಂದಿನ ತಪ್ಪು ಹಾದಿಯ ಉದಾರೀಕರಣದ ಫಲವಾಗಿ ಆರ್ಥಿಕ ಅಸಮಾನತೆ ಬಲುದೊಡ್ಡ ಸವಾಲಾಗಿ ನಿಂತಿದೆ. ಮುಕ್ಕಾಲು ಪಾಲು ಭಾರತ ಈ “ಉದಾರೀಕರಣದ ಫಲ ತಿನ್ನುವ” ಕಂಪೌಂಡಿನಿಂದ ಹೊರಗೇ ಉಳಿದಿದೆ.
ನಿಜಕ್ಕೆಂದರೆ, ಮನಮೋಹನ್ ಸಿಂಗ್ 2.0 ಗೆ ಕಾಲ ಸನ್ನಿಹಿತವಾಗಿದೆ.
ಮನಮೋಹನ್ ಸಿಂಗ್ 1.0 ಆಧುನಿಕ ಭಾರತದ ಇತಿಹಾಸದಲ್ಲಿ ಶಾಶ್ವತವಾಗಿ ಮಿನುಗಲಿರುವ ನಕ್ಷತ್ರ. ಅದಕ್ಕೆ ಅನುಮಾನವೇ ಬೇಡ. ವರ್ಷಗಳು ಕಳೆದಂತೆ, ದೇಶ ಮನಮೋಹನ್ ಸಿಂಗ್ ಅವರತ್ತ ಇನ್ನಷ್ಟು “ಸಹಾನುಭೂತಿ” ಹೊಂದಲಿದೆ.
(ಚಿತ್ರದಲ್ಲಿ: ಭಾರತವನ್ನು ಉದಾರೀಕರಣದ ಹಾದಿಯಲ್ಲಿ ಕೊಂಡೊಯ್ದ ಗುರು-ಶಿಷ್ಯರು. ಗುರು ಡಾ|ಮನಮೋಹನ್ ಸಿಂಗ್, ಶಿಷ್ಯ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ. ಚಿತ್ರ ಸೌಜನ್ಯ: ಇಂಡಿಯಾ ಟುಡೇ)


