ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಪ್ರಜಾ ಸೇನೆ, ಆಲ್ ಇಂಡಿಯಾ ಬಹುಜನ ಸಮಾಜದ ಪಾರ್ಟಿ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಹೆಸರು ಉಚ್ಛರಿಸುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಉಚ್ಛರಿಸುವ ಬದಲು ದೇವರ ಹೆಸರನ್ನು ಉಚ್ಛರಿಸಿದ್ದರೆ ಏಳು ಜನ್ಮದವರೆಗೂ ಸ್ವರ್ಗ ಪಡೆಯಬಹುದು ಎಂದು ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಈ ಕೂಡಲೇ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಪ್ರಜಾಪ್ರಭುತ್ವ ಸಮಾನತೆ ಮತ್ತು ನ್ಯಾಯಾದ ಸಿದ್ದಾಂತಗಳಿಗೆ ಅಡಿಪಾಯ ಹಾಕಿದ ಮಹಾನ್ ನಾಯಕರು. ಅವರ ಹೆಸರು ಮಾತ್ರವಲ್ಲ, ಅವರ ಆದರ್ಶಗಳು ಮತ್ತು ಅವರ ಕೃತಿಗಳು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದೆ. ಹೀಗಿದ್ದರೂ ಸಹ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ಹೇಳಿದರು.
ಪ್ರಜಾಪ್ರಭುತ್ವದ ವಿರುದ್ದವಾದ, ಸಮಾನತೆಗೆ ವಿರುದ್ಧವಾದ ಮತ್ತು ಅಂಬೇಡ್ಕರ್ ಗೌರವಕ್ಕೆ ಅವಮಾನಕರ ಹೇಳಿಕೆ ನೀಡಿರುವ ಅಮಿತ್ ಶಾ ಕೇಂದ್ರ ಗೃಹ ಸಚಿವರ ಸ್ಥಾನಕ್ಕೆ ತಕ್ಕವರಲ್ಲ. ಆದ್ದರಿಂದ ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಡ್ಯಾಗೇರಹಳ್ಳಿ ವಿರೂಪಾಕ್ಷ, ಪಿ.ಎನ್. ರಾಮಯ್ಯ, ಬಂಡಕುಮಾರ, ಮುರುಳಿ ಕುಂದೂರು, ಭರತ್‌ಕುಮಾರ್, ಕೆಂಪರಾಜು, ಕುಪ್ಪೂರು ಶ್ರೀಧರ್, ಶ್ರೀನಿವಾಸ್, ಮಂಜುನಾಥ್, ಎನ್. ಕುಮಾರ್, ಚಂದ್ರ, ರಾಜೇಶ್, ನಾಗೇಂದ್ರ, ಸೋಮಣ್ಣ, ವೀರಕ್ಯಾತಯ್ಯ, ಮೂರ್ತಿ, ಕಲಾಶ್ರೀ ನರಸಿಂಹದಾಸ್, ಬೋರಯ್ಯ, ವೈ.ಕೆ. ಬಾಲಕೃಷ್ಣಪ್ಪ, ಬಸವರಾಜು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರಗೌಡ, ಕೆಂಚಮಾರಯ್ಯ, ವಾಲೆಚಂದ್ರಯ್ಯ, ಆಟೋರಾಜು, ಮೆಹಬೂಬು ಪಾಷ, ಸುಜಾತ ಸೇರಿದಂತೆ ದಲಿತ ಪರ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.


