ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಹೇಮಗಿರಿ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಮೂರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಹಲವು ದಿನಗಳಿಂದ ವಿಪರೀತ ಕೆಮ್ಮು ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದಾರೆ ಯಾರೂ ಕೇಳುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ನಾಗಣ್ಣ ಆರೋಪಿಸಿದ್ದಾರೆ.
ಇಲ್ಲಿನ ನೂರಕ್ಕೂ ಹೆಚ್ಚು ಮಕ್ಕಳಿಗೆ ಚರ್ಮದ ಅಲರ್ಜಿ, ಕಜ್ಜಿ ರೋಗ ಬಂದಿದ್ದು ನೋವಿನಿಂದ ಪರಿತಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ನಾನಕ್ಕೆ , ಮುಖ ಮತ್ತು ಕೈ ತೊಳೆಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ. ವಿದ್ಯಾರ್ಥಿಗಳು ಬಳಸುವ ನೀರನ್ನು ಸಂಗ್ರಹಿಸಿರುವ ತೊಟ್ಟಿ ಸಂಪೂರ್ಣ ಕಲುಷಿತವಾಗಿದ್ದು ಪಾಚಿಕಟ್ಟಿಕೊಂಡು ನೀರಿನಲ್ಲಿ ಹುಳಗಳು ಸೃಷ್ಟಿಯಾಗಿವೆ. ಇಲ್ಲಿನ ಸಿಬ್ಬಂದಿ ಇದನ್ನು ಸರಿಯಾಗಿ ನಿರ್ವಹಣೆ ಮಾಡದೆ ಅವೈಜ್ಞಾನಿಕವಾಗಿ ಬ್ಲೀಚಿಂಗ್ ಪೌಡರ್ ಸುರಿದಿದ್ದಾರೆ. ಈ ನೀರನ್ನು ಬಳಸಿದ ಮಕ್ಕಳಿಗೆ ಚರ್ಮಕ್ಕೆ ಸಂಬಂಧಿಸಿದ ರೋಗ ಬಂದಿವೆ ಎಂದು ಆಪಾದಿಸಿದ್ದಾರೆ.
ಗಂಡುಮಕ್ಕಳು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ಇರುವ ವಸತಿ ನಿಲಯಗಳಲ್ಲಿ ಸೋಲಾರ್ ಅಳವಡಿಕೆ ಇದ್ದರೂ ಕೂಡ ಎಲ್ಲಾ ಮಕ್ಕಳಿಗೂ ಸ್ನಾನಕ್ಕೆ ಬಿಸಿ ನೀರು ಸಿಗುತ್ತಿಲ್ಲ. ಇಪ್ಪತ್ತು ಹೆಣ್ಣು ಮಕ್ಕಳ ಸ್ನಾನ ಗೃಹಕ್ಕೆ ಕೇವಲ ಎರಡು ಸೋಲಾರ್ ನಲ್ಲಿ ಇದ್ದು, ಈ ನಲ್ಲಿಯನ್ನು ಬೆಳಗ್ಗೆ ಕೆಲವೇ ಗಂಟೆಗಳು ಮಾತ್ರ ಆನ್ ಮಾಡಲಾಗುತ್ತದೆ. ಇದರಿಂದ ಸ್ನಾನಕ್ಕೆ ಬಿಸಿ ನೀರು ಸಿಗದೆ ತಣ್ಣೀರಿನಲ್ಲಿ ಸ್ನಾನ ಮಾಡುವ ಮಕ್ಕಳಿಗೆ ವಿಪರೀತ ಶೀತವಾಗಿದೆ ಎಂದು ಹೇಳಿದ್ದಾರೆ.
ಈ ವಸತಿ ನಿಲಯದಲ್ಲಿ ಇರುವ ಮತ್ತೊಂದು ಮುಖ್ಯ ಸಮಸ್ಯೆ ಎಂದರೆ ವಿದ್ಯಾರ್ಥಿಗಳಿಗೆ ಬೆಚ್ಚನೆಯ ಹಾಸಿಗೆ ಇಲ್ಲ. ಮಂಚದ ವ್ಯವಸ್ಥೆಯೂ ಇಲ್ಲ. ಮಕ್ಕಳು ಶೀತದ ನೆಲದ ಮೇಲೆ ಮಲಗಬೇಕು. ಒಂದು ಕೊಠಡಿಯಲ್ಲಿ ಮೂರು ಮಕ್ಕಳು ಮಾತ್ರ ಹಾಸಿಗೆ ಮೇಲೆ ಮಲಗಿದರೆ ಇನ್ನುಳಿದ ಹತ್ತು ಮಕ್ಕಳು ಶೀತ ನೆಲದ ಮೇಲೆ ಮಲಗಬೇಕು. ಇಲ್ಲಿರುವ ಎಲ್ಲಾ ಕೊಠಡಿಗಳ ಸಮಸ್ಯೆಯೂ ಇದೆಯಾಗಿದೆ ಎಂದು ತಿಳಿಸಿದ್ದಾರೆ.
ಅರೆ ಬೆಂದ ( ಮುಳ್ಳು ಅಕ್ಕಿ) ಅನ್ನ ತಿನ್ನುವ ಮಕ್ಕಳು
ಈ ವಸತಿ ನಿಲಯದ ಊಟದ ವಿಚಾರಕ್ಕೆ ಬಂದರೆ ಅನ್ನ ಸರಿಯಾಗಿ ಬೆಂದಿರುವುದಿಲ್ಲ. ಅರೆ ಬೆಂದ ಅಕ್ಕಿಯ ಅನ್ನ ತಿನ್ನುವುದರಿಂದ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿಗಳಿ ಹೊಟ್ಟೆ ತುಂಬ ಊಟ ನೀಡುವುದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಗಳು ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ಈ ಶಾಲೆಗೆ ವಿಶಾಲವಾದ ಜಾಗವಿದ್ದು ಹೇಮಗಿರಿ ಬೆಟ್ಟದ ಸುಂದರ ಪ್ರಕೃತಿಯ ತಾಣವಾಗಿದೆ. ಆದರೆ ವಿಶಾಲವಾದ ಆಟದ ಮೈದಾನವಿಲ್ಲ ಪಾಠದ ಜೊತೆಗೆ ಕ್ರೀಡೆ ಮತ್ತು ಮನೋರಂಜನೆ ಅವಶ್ಯಕತೆ ಇದೆ. ಇಲ್ಲಿ ಬಹುತೇಕ ಮಕ್ಕಳು ಲವಲವಿಕೆಯನ್ನು ಕಳೆದುಕೊಂಡರು ಸಪ್ಪೆಮುಖ ಹಾಕಿಕೊಂಡು ಪಂಜರದ ಗಿಳಿಯಂತಾಗಿದ್ದಾರೆ.
ಈ ವಸತಿ ನಿಲಯಕ್ಕೆ ನೀರಿನ ಸರಬರಾಜಿಗೆ ಒಂದು ಪ್ರತ್ಯೇಕ ಬೋರ್ ವೆಲ್ ಇದೆ. ಆದರೆ ಈ ಬೇರ್ ವೆಲ್ ನೀರು ಕಲುಷಿತವಾಗಿದ್ದು ಇದರಿಂದ ಹಳದಿ ಬಣ್ಣದ ನೀರು ಬರುತ್ತದೆ ಈ ನೀರನ್ನೆ ಕುಡಿಯಲು ಮತ್ತು ನಿತ್ಯ ಕೆಲಸಗಳಿಗೆ ಬಳಸಲಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಮತ್ತೊಂದು ಹೊಸ ಬೋರ್ ವೆಲ್ ಕೊರೆಸಬೇಕೆಂದು ಗ್ರಾಮಪಂಚಾಯಿತಿಗೆ ಮನವಿ ಮಾಡಿದ್ದರೂ ನಮ್ಮ ಬೇಡಿಕೆ ಈಡೇರಿಲ್ಲ ಅನ್ನುತ್ತಾರೆ ನಿಲಯ ಪ್ರಭಾರ ಮೇಲ್ವಿಚಾರಕರು. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇದಕ್ಕೆ ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈ ಸಮಸ್ಯೆ ತಿಳಿದ ತಕ್ಷಣ ನಾನು, ಶೋಷಿತ ಸಮುದಾಯಗಳ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶಿವರಾಜು, ಕುಣಿಗಲ್ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೋಲಿಗರ ಹೊನ್ನಪ್ಪ, ಕುಣಿಗಲ್ ತಾಲ್ಲೂಕು ಆರೋಗ್ಯ ಅಧಿಕಾರಿ ಮರಿಯಪ್ಪ ಮತ್ತು ಆರೋಗ್ಯ ಇಲ್ಲಾಖೆಯ ಸಿಬ್ಬಂದಿ ಭೇಟಿ ನೀಡಿ ಮಕ್ಕಳ ಆರೋಗ್ಯ ಪರಿಶೀಲಿಸಿದ್ದು ವಿದ್ಯಾರ್ಥಿಗಳು ಕಜ್ಜಿಯಿಂದ ನರಳುತ್ತಿದ್ದಾರೆ ಎಂದರು. .
ಈ ವಸತಿ ಶಾಲೆ ಅವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸದೇ ಇದ್ದರೆ ಸಂಬಂಧಪಟ್ಟ ಇಲಾಖೆ ವಿರುದ್ದ ಪ್ರತಿಭಟನೆ ನೆಡೆಸಲಾಗುವುದು ಎಂದು ಜಿ.ಕೆ ನಾಗಣ್ಣ ಎಚ್ಚರಿಕೆ ನೀಡಿದ್ದಾರೆ.


