ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಸಿ.ಟಿ.ರವಿ ಅವರು ನನ್ನ ಮೇಲೆ ಅಶ್ಲೀಲ ಪದವನ್ನು ಬಳಸಿ ನಿಂದಿಸಿದರು. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಸದಸ್ಯರು ಸಾಕ್ಷಿಯಾದರು. ಇದನ್ನು ನೋಡಿಯೂ ನೋಡದವರಂತೆ ವರ್ತಿಸಿದ್ದು ಬೇಸರ ಮೂಡಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕರಾಗಿ ನುಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಷತ್ ಕಲಾಪ ನಡೆಯುವ ಸಂದರ್ಭದಲ್ಲಿ ಸದಸ್ಯ ಸಿ.ಟಿ.ರವಿ ಅವರು ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟರ್ ಎಂದು ಕರೆದರು. ಅದಕ್ಕೆ ನಾನು ‘ನೀವು ಕಾರು ಅಪಘಾತದಲ್ಲಿ ಮೂವರನ್ನು ಸಾಯಿಸಿದಿರಿ. ಕೊಲೆಗಡುಕು ನೀವು ಎಂದು ಹೇಳಿದೆ. ಈ ಪದವನ್ನು ಉಲ್ಲೇಖ ಮಾಡಿದ್ದೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಿಳಿಸಿದರು.
ಅದಕ್ಕೆ ಸಿ.ಟಿ.ರವಿ ಅವರು ನನ್ನನ್ನು ಆಶ್ಲೀಲ ಶಬ್ದಗಳಿಂದ ನಿಂದಿಸಿದರು. ಹತ್ತಾರು ಬಾರಿ ಅದೇ ಪದವನ್ನು ಬಳಿಸಿ ಅವಮಾನ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಸಾಕ್ಷಿಯಾದರು. ಇದಕ್ಕೆ ಎಲ್ಲರೂ ನನ್ನ ನೆರವಿಗೆ ಬರುತ್ತಾರೆ ಎಂದು ಭಾವಿಸಿದೆ. ನನ್ನ ಪಕ್ಷದ ಸದಸ್ಯರನ್ನು ಬಿಟ್ಟು ಯಾರೂ ನನ್ನ ನೆರವಿಗೆ ಬರಲಿಲ್ಲ. ಬಿಜೆಪಿ ಸದಸ್ಯರು ದೃಷ್ಟರಾಷ್ಟ್ರರಂತೆ ವರ್ತಿಸಿದರು ಎಂದು ನೊಂದು ನುಡಿದರು.
ವಿಧಾನ ಪರಿಷತ್ ಎಂದರೆ ಹಿರಿಯರ ಮನೆ, ಅನುಭವಿಗಳ ಮನೆ ಎಂಬುದು ಇತಿಹಾಸ. ಆದರೆ ಅಂತಹ ಮನೆಯಲ್ಲಿ ಮಹಿಳೆಯೊಬ್ಬರಿಗೆ ಅವಮಾನವಾಗಿದೆ. ನಾನು ಸಭಾಪತಿಗೆ ದೂರು ನೀಡಿದ್ದೇನೆ. ಮಹಿಳೆಯಾಗಿ ದಿಟ್ಟವಾಗಿ ನಿಲ್ಲುತ್ತೇನೆ ಎಂದು ಭಾವುಕರಾದರು.


