Thursday, January 29, 2026
Google search engine
Homeಮುಖಪುಟಅಂಬೇಡ್ಕರ್ ಕುರಿತ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ಬಾಲಕೃಷ್ಣಪ್ಪ ಖಂಡನೆ

ಅಂಬೇಡ್ಕರ್ ಕುರಿತ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ಬಾಲಕೃಷ್ಣಪ್ಪ ಖಂಡನೆ

‘ಅಂಬೇಡ್ಕರ್,,, ಅಂಬೇಡ್ಕರ್,,, ಅಂಬೇಡ್ಕರ್ ಎಂದು ಸ್ಮರಿಸುವುದು ಇತ್ತೀಚೆಗೆ ಫ್ಯಾಶನ್ ಆಗಿಬಿಟ್ಟಿದೆ. ಅದರ ಬದಲಾಗಿ ಅಷ್ಟೇ ಬಾರಿ ದೇವರ ಸ್ಮರಣೆ ಮಾಡಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಸಂಸತ್ತಿನಲ್ಲಿ ಹೇಳುವ ಮೂಲಕ ಸಂವಿಧಾನ ರಚನಾಕಾರರಾದ ಬಾಬಾ ಸಾಹೇಬರನ್ನು ಅವಮಾನಿಸಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹೇಳಿಕೆಯನ್ನು ಅಂಬೇಡ್ಕರ್-ಲೋಹಿಯಾ ಅಧ್ಯಯನ ಕೇಂದ್ರದ ಡಾ.ವೈ.ಕೆ.ಬಾಲಕೃಷ್ಣಪ್ಪ ಮತ್ತು ಹೆಚ್.ಟಿ.ರವಿಕುಮಾರ್ ತೀವ್ರ ಖಂಡಿಸಿದ್ದಾರೆ.

ಅವರ ಹೇಳಿಕೆಯ ಜವಾಬ್ದಾರಿಯುತವಾದ ಪ್ರಜಾಪ್ರತಿನಿಧಿಯ ಹೇಳಿಕೆಯಂತೆ ಇರದೆ, ಜಾತಿಗ್ರಸ್ಥ ಸಮಾಜದ ಪ್ರತಿನಿಧಿಯ ಹೇಳಿಕೆಯಂತಿದ್ದು ಅವರು ಪ್ರಜಾ ಪ್ರತಿನಿಧಿಯಾಗಿ ಮುಂದುವರೆಯುಲು ಯೋಗ್ಯತೆ ಇರುವುದಿಲ್ಲ. ಆದ ಕಾರಣ ತಮ್ಮ ಸಚಿವ ಸ್ಥಾನ ಮತ್ತು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಅಂಬೇಡ್ಕರ್ ಅವರಿಗೆ ಅವಮಾನಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರವಾಗಿರುತ್ತದೆ. ಚುನಾವಣಾ ಲಾಭಕ್ಕಾಗಿ ಅಂಬೇಡ್ಕರ್‌ವಾದಿಗಳನ್ನು ಓಲೈಸುವ ನಾಟಕವಾಡುತ್ತಲೇ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದ ಬಿಜೆಪಿಯವರ ನಿಜ ಬಣ್ಣ ಗೃಹಮಂತ್ರಿ ಅಮಿತ್ ಶಾ ಅವರ ಹೇಳಿಕೆಯಿಂದ ಬಯಲಾಗಿದೆ ಎಂದಿದ್ದಾರೆ.

ಅಂಬೇಡ್ಕರ್ ಎಂದರೆ ಅರಿವೆಂಬೋ ಜ್ಞಾನ ಜ್ಯೋತಿ, ಅಂಬೇಡ್ಕರ್ ಎಂದರೆ ಮಾನವ ಹಕ್ಕುಗಳ ಹೋರಾಟಗಾರ, ಅಂಬೇಡ್ಕರ್ ಎಂದರೆ ವಿಮೋಚನಾಕಾರ, ಅಂಬೇಡ್ಕರ್ ಎಂದರೆ ದೀನ ದಲಿತರ ಪಾಲಿನ ದಾರಿದೀಪ; ಅಂಬೇಡ್ಕರ್ ಎಂದರೆ ಸಮಾನತೆಯ ಹರಿಕಾರ ಅದಕ್ಕಾಗಿ ಈ ನೆಲದ ಶ್ರಮ ಸಂಸ್ಕೃತಿಯ ಜನತೆ ಅಂಬೇಡ್ಕರ್ ಅವರನ್ನು ಸ್ಮರಿಸುತ್ತದೆ. ಎಲ್ಲೆಲ್ಲಿ ಜಾತಿ ತಾರತಮ್ಯ, ಅಸಮಾನತೆ ಮತ್ತು ಮಾನವ ಹಕ್ಕುಗಳ ದಮನ ಇರುತ್ತದೋ ಅಲ್ಲೆಲ್ಲಾ ಅಂಬೇಡ್ಕರ್ ಇದ್ದೇ ಇರುತ್ತಾರೆ. ಈ ಕಾರಣಕ್ಕೆ ಅಂಬೇಡ್ಕರ್ ದಲಿತ-ದಮನಿತರ ಪ್ರಾಣಪಕ್ಷಿ ಅವರನ್ನು ಅರಿತಷ್ಟು ಈ ಸಮಾಜ ಬೆಳೆಯುತ್ತದೆ. ಅಂಬೇಡ್ಕರ್ ಬಯಸಿದ ಸಮ ಸಮಾಜದ ವಿರೋಧಿಗಳು ಮಾತ್ರ ಅಂಬೇಡ್ಕರ್ ಅವರನ್ನು ತುಚ್ಛವಾಗಿ ಕಾಣಲು ಸಾಧ್ಯ. ಇದರಿಂದ ಅಂಬೇಡ್ಕರ್ ಘನತೆಗೆ ಯಾವ ಕುಂದು ಉಂಟಾಗುವುದಿಲ್ಲ. ಬದಲಾಗಿ ಅಂತಹವರು ತಮ್ಮ ಘನತೆಯನ್ನು ತಾವೇ ಕಳೆದುಕೊಳ್ಳುತ್ತಾರೆ.

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಅಂಬೇಡ್ಕರ್ ಅವರ ಬಗ್ಗೆ ಅಸಹನೆ ಇದೆಯೇ ಅಥವಾ ಅಜ್ಞಾನವಿದೆಯೋ ತಿಳಿಯುತ್ತಿಲ್ಲ. ಆದರೆ ಅವರು ಅಂಬೇಡ್ಕರ್ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳ್ಳೆಯದು. 1991ರಲ್ಲಿ ಲೋಕಸಭಾ ಸಚಿವಾಲಯವು ಅಪ್ರತಿಮ ಸಂಸದೀಯ ಪಟುಗಳ ಮಾಲಿಕೆಯನ್ನು ಹೊರತಂದಿದ್ದು. ಈ ಪೈಕಿ ಮಾಲಿಕೆ-12 ಡಾ.ಬಿ.ಆರ್.ಅಂಬೇಡ್ಕರ್ ಕುರಿತಾದ ಮಾಲಿಕೆಯಾಗಿರುತ್ತದೆ ಮತ್ತು ಅಮಿತ್ ಶಾ ಅವರು ಕಾರ್ಯನಿರ್ವಹಿಸುವ ಸಂಸತ್ತಿನಲ್ಲಿಯೇ ದೊರೆಯುತ್ತದೆ. ಅದರಲ್ಲಿ ಅನೇಕ ವಿದ್ವಾಂಸರು ಬಾಬಾ ಸಾಹೇಬರ ಕುರಿತಾಗಿ ಲೇಖನಗಳನ್ನು ಬರೆದಿದ್ದು, ಅವುಗಳಲ್ಲಿ ಬಾಬಾ ಸಾಹೇಬರ ಸಾಧನೆ, ವಿಚಾರಗಳ ಪ್ರಸ್ತಾಪವಿದೆ. ಕನಿಷ್ಠ ಪಕ್ಷ ಅಷ್ಟನ್ನಾದರೂ ಕೇಂದ್ರ ಗೃಹ ಮಂತ್ರಿಗಳು ಓದಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಹುಡುಕಿ ತೆಗೆದುಕೊಳ್ಳಲು ಅವರಿಗೆ ಸಮಯಾವಕಾಶವಿಲ್ಲದಿದ್ದಲ್ಲಿ ನಮ್ಮ ಕೇಂದ್ರವೇ ಅಂಬೇಡ್ಕರ್ ಸಮಗ್ರ ಬರಹಗಳು ಮತ್ತು ಭಾಷಣಗಳನ್ನು ಒಳಗೊಂಡ ಸಂಪುಟಗಳನ್ನು ಹಾಗೂ ಸಚಿವಾಲಯದ ಮಾಲಿಕೆ-12ರನ್ನು ಕಳುಹಿಸಲು ಸಿದ್ದರಿದ್ದೇವೆ ಎಂದು ಈ ಮೂಲಕ ಗೃಹ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಬಯಸುತ್ತದೆ. ಅಂಬೇಡ್ಕರ್ ಅವರ ಜ್ಞಾನದ ಹಣತೆಯನ್ನು ಕೈಯಲ್ಲಿಡಿದು ಸಾಗುತ್ತಿರುವ ನಮ್ಮ ಕೇಂದ್ರವು ಗೃಹ ಮಂತ್ರಿಗಳಿಗೆ ಅಂಬೇಡ್ಕರ್‌ರವರ ಬಗ್ಗೆ ಅರಿವು ಮೂಡಿಸುವುದು ಕರ್ತವ್ಯ ಎಂದು ಭಾವಿಸುತ್ತದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular