ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ, ಬಂಧಿಸಿಲಾಗಿದೆ ಎಂದಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಜನರನ್ನು ವಂಚಿಸುತ್ತಾ ಬಂದಿದೆ. ತನ್ನ ಆಡಳಿತ ಹುಳುಕನ್ನು ಜನ ಪ್ರಶ್ನೆ ಮಾಡಬಾರದು ಎಂದು ವಿವಾದಗಳನ್ನು ಸೃಷ್ಟಿಮಾಡಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸಲು ಮುಂದಾದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರನ್ನು ಹತ್ತಿಕ್ಕಲು ಸುಳ್ಳು ಆರೋಪದ ವಿವಾದ ಸೃಷ್ಟಿಸಲಾಗಿದೆ. ಅವರ ಮೇಲೆ ಹಲ್ಲೆ ಮಾಡಿ, ಕೊಲೆ ಬೆರದಿಕೆ ಹಾಕಲಾಗಿದೆ. ಆದರೆ ಸಿ.ಟಿ.ರವಿಯವರು ಅಭಿಪ್ರಾಯ ಹೇಳಲೂ ಅವಕಾಶ ನೀಡಿದೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಭಯೋತ್ಪಾದಕರ ರೀತಿ ನಡೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡದ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಚರ್ಚೆ ಮಾಡಲು ಹೊರಟಿ ಸಿಟಿ ರವಿ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಗೂಂಡಾಗಳಿಂದ ಹಲ್ಲೆ ಮಾಡಿಸಿ, ಪೊಲೀಸರನ್ನು ಬಳಸಿಕೊಂಡು ಕೇಸು ದಾಖಲಿಸಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಈ ಭ್ರಷ್ಟ, ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಸುವರ್ಣಸೌಧದಲ್ಲಿ ಸಭಾಪತಿಗಳ ಆನುಮತಿ ಪಡೆಯದೆ ಸಿ.ಟಿ.ರವಿಯವರನ್ನು ಬಂಧಿಸಿದರು. ಅವರ ಮೇಲೆ ಹಲ್ಲೆಯಾಗಿದೆ, ಕೊಲೆ ಬೆದರಿಕೆ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕಾರಣ ಎಂದರು.
ಗುಬ್ಬಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜ್ಯೋತಿ ತಿಪ್ಪೇಸ್ವಾಮಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಶಿವಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಉಪಾಧ್ಯಕ್ಷ ಭೈರಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು ಮೊದಲಾದವರು ಇದ್ದರು.


