ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಹುಭಾಷಾ ನಟಿ ಚಿತ್ರಾ(56) ಆಗಸ್ಟ್ 21ರಂದು ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ, ಪುತ್ರಿ ಮತ್ತು ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಅಗಲಿದ್ದಾರೆ. ಚಿತ್ರಾ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಬಹುಭಾಷ ನಟಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಿಧನರಾಗಿರುವ ಸುದ್ದಿ ಹರಡುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.
1983ರಲ್ಲಿ ಪ್ರೇಮ್ ನಜೀರ್ ಮತ್ತು ಮೋಹನ್ ಲಾಲ್ ಜೊತೆಯಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಚಿತ್ರಾ ಸುಮಾರು 38 ವರ್ಷಗಳ ಚಿತ್ರರಂಗದಲ್ಲಿ ಹಲವು ವಿಭಿನ್ನ, ವೈಶಿಷ್ಟ್ಯ ಪಾತ್ರಗಳಲ್ಲಿ ಅಭಿನಯಿಸಿ ತನ್ನದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದರು. ಅಟ್ಟಕಲಶಂ ಚಿತ್ರಾ ಅವರ ಮೊದಲ ಚಿತ್ರ.
ಮಲಯಾಳಂ ಭಾಷೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಚಿತ್ರಗಳು, ತಮಿಳಿನಲ್ಲಿ 42, ತೆಲುಗಿನಲ್ಲಿ 6, ಕನ್ನಡದಲ್ಲಿ 3 ಮತ್ತು ಹಿಂದಿಯಲ್ಲಿ 2 ಚಿತ್ರಗಳಲ್ಲಿ ಉತ್ತಮ ಅಭಿನಯ ಮಾಡಿ ಜನಮನವನ್ನು ಗೆದ್ದಿದ್ದರು. ಬೆಳ್ಳಿತೆರೆಯಲ್ಲದೆ ಕಿರುತೆರೆಯಲ್ಲೂ ನಟಿಸಿ ಮನೆ ಮನಗಳಲ್ಲಿ ಸ್ಥಾನ ಪಡೆದಿದ್ದರು.
ಕನ್ನಡದಲ್ಲಿ ಸುಂದರ ಸ್ವಪ್ನಗಳು ಚಿತ್ರದಲ್ಲಿ ಕಮಲ ಪಾತ್ರ, ಕೃಷ್ಣಮೆಚ್ಚಿದ ರಾಧೆ, ಅಜಯ್-ವಿಜಯ್ ಚಿತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಅಮಾವಾಸ್ಯೆಯ ಚಂದ್ರುಡು, ನೇಟಿ ಸ್ವತಂತ್ರಂ, ಪ್ರೇಮಿಂಚಿಕು ಚಿತ್ರದಲ್ಲಿ ಅಭಿನಯಿಸಿದ್ದರು. ಖ್ಯಾತ ಹಿರೋಗಳಾದ ಮುಮ್ಮಟ್ಟಿ, ಮುಖೇಶ್ ಸೇರಿದಂತೆ ಹಲವು ನಾಯಕ ನಟರ ಜೊತೆ ಅಭಿನಯಿಸಿ ಚಿತ್ರರಸಿಕರ ಮನ ಸೂರೆಗೊಂಡಿದ್ದರು.
1965, ಮೇ 21 ರಂದು ಜನಿಸಿದ್ದ ಚಿತ್ರಾ ಆಗಸ್ಟ್ 21, 2021ರಂದು ನಿಧನರಾಗಿದ್ದಾರೆ. ಕೆ.ಸುರೇಂದ್ರನ್ ಅವರು ಟ್ವೀಟ್ ಮಾಡಿ ಚಿತ್ರಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಚಿತ್ರಾ ನಿಧನಕ್ಕೆ ದಕ್ಷಿಣ ಭಾರತದ ಚಿತ್ರರಂಗ ತೀವ್ರ ಸಂತಾಪ ಸೂಚಿಸಿದೆ.