ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪದಲ್ಲಿ ಹಿಂಡಲಗಾ ಜೈಲು ಸೇರಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಆಗಸ್ಟ್ 21ರಂದು ಬಿಡುಗಡೆಗೊಳಿಸಲಾಯಿತು. ನೂರಾರು ಅಭಿಮಾನಿಗಳು ಜೈಲಿನಿಂದ ಬಿಡುಗಡೆಗೊಂಡ ವಿನಯ್ ಕುಲಕರ್ಣಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ನಂತರ ಕುಲಕರ್ಣಿ ಅವರನ್ನು ಹಿಂಡಲಗಾ ಜೈಲಿನಲ್ಲಿ ಇಟ್ಟಿದ್ದರು. 9 ತಿಂಗಳು 16 ದಿನಗಳನ್ನು ವಿನಯ್ ಕುಲಕರ್ಣಿ ಜೈಲಿನಲ್ಲೇ ಕಾಲ ಕಳೆಯಬೇಕಾಯಿತು.
ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಇಂದು ವಿನಯ್ ಕುಲಕರ್ಣಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಪಕ್ಷದ ಮಹಿಳಾ ಕಾರ್ಯಕರ್ತರು ವಿನಯ್ ಕುಲಕರ್ಣಿ ಅವರಿಗೆ ರಾಖಿ ಕಟ್ಟಿ ಸ್ವಾಗತಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ “ನನಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಮುಂದಿನ ದಿನಗಳಲ್ಲಿ ನಾನು ನಿರ್ದೋಷಿಯಾಗಿ ಹೊರಬರುತ್ತೇನೆ. ಹೋರಾಟ ಮುಂದುವರಿಸುತ್ತೇನೆ. ಹೋರಾಟ ಮಾಡಿಯೇ ಕೇಸ್ ನಿಂದ ಮುಕ್ತಿ ಪಡೆಯುತ್ತೇನೆ. ಜೈಲು ಶಿಕ್ಷೆ ಒಂದು ರೀತಿಯ ಟಾಸ್ಕ್ ನಂತೆ ಇತ್ತು” ಎಂದು ತಿಳಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ” ಇತ್ತೀಚಿನ ಘಟನೆಗಳು ಕುಲಕರ್ಣಿ ಅವರ ಕುಟುಂಬವನ್ನು ಘಾಸಿಗೊಳ್ಳುವಂತೆ ಮಾಡಿದೆ. ಅವರು ಗೆದ್ದು ಬರುತ್ತಾರೆ. ಕುಲಕರ್ಣಿ ಅವರೊಂದಿಗೆ ಪಕ್ಷ ಸದಾ ಬೆನ್ನೆಲುಬಾಗಿರುತ್ತದೆ. ಅವರೊಬ್ಬ ದೊಡ್ಡ ಸಮಾಜದ ನಾಯಕ. ಅವರ ಬಿಡುಗಡೆಯಾಗಿರುವುದರಿಂದ ಪಕ್ಷಕ್ಕೂ ಅನುಕೂಲವಾಗಲಿದೆ” ಎಂದು ಹೇಳಿದರು.